HD ರೇವಣ್ಣಗೆ 7 ದಿನ ನ್ಯಾಯಾಂಗ ಬಂಧನ; ಸೆಕ್ಸ್ ವಿಡಿಯೋ ಬಹಿರಂಗಗೊಳಿಸಿದವನ ಬಂಧಿಸಿಲ್ಲ ಯಾಕೆ? HDK; ಮಹಿಳೆಯರ ವಿಡಿಯೋ ಚಿತ್ರೀಕರಣ: ಅಪ್ರಾಪ್ತನ ಬಂಧನ! ಇಂದಿನ ಸುದ್ದಿ ಮುಖ್ಯಾಂಶಗಳು 08-05-24

HD ರೇವಣ್ಣಗೆ 7 ದಿನ ನ್ಯಾಯಾಂಗ ಬಂಧನ; ಸೆಕ್ಸ್ ವಿಡಿಯೋ ಬಹಿರಂಗಗೊಳಿಸಿದವನ ಬಂಧಿಸಿಲ್ಲ ಯಾಕೆ? HDK; ಮಹಿಳೆಯರ ವಿಡಿಯೋ ಚಿತ್ರೀಕರಣ: ಅಪ್ರಾಪ್ತನ ಬಂಧನ! ಇಂದಿನ ಸುದ್ದಿ ಮುಖ್ಯಾಂಶಗಳು 08-05-24

1. ಎಚ್ ಡಿ ರೇವಣ್ಣಗೆ 7 ದಿನ ನ್ಯಾಯಾಂಗ ಬಂಧನ

ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರಿಗೆ ಕೋರ್ಟ್ 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಎಸ್ಐಟಿ ಕಸ್ಟಡಿ ಇಂದಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ಬೆಂಗಳೂರಿನ 17ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಧೀಶರು ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ. ನಾಳೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ರೇವಣ್ಣ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಒಂದು ವೇಳೆ ಜಾಮೀನು ಸಿಗದ್ದಿದ್ದರೆ ಮೇ 14ರವರೆಗೆ ರೇವಣ್ಣ ಜೈಲಿನಲ್ಲೇ ಇರಬೇಕಾಗುತ್ತದೆ.

2. ಸೆಕ್ಸ್ ವಿಡಿಯೋ ಬಹಿರಂಗಗೊಳಿಸಿದವನ ಬಂಧಿಸಿಲ್ಲ ಯಾಕೆ? HDK

ಈಮಧ್ಯೆ, ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನಿಮ್ಮ ತನಿಖೆ ಎಚ್ ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಮೇಲೆ ಮಾತ್ರ ಯಾಕೆ ಸೀಮಿತವಾಗಿದೆ. ವಿಡಿಯೋ ಬಿಡುಗಡೆ ಮಾಡಿದವರನ್ನ ಯಾಕೆ ತನಿಖೆ ಮಾಡುತ್ತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಅವರನ್ನು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಎಸ್ಐಟಿ ರಚನೆ ಆಗಿದೆ. ಮಹಿಳಾ ಆಯೋಗ ಕೂಡ ಪತ್ರ ಬರೆದಿದೆ. ವಿಡಿಯೋ ಲೀಕ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು. ಆದ್ರೆ, ಇದುವರೆಗೂ ಏನು ಮಾಡಿಲ್ಲ. ನವೀನ್, ಕಾರ್ತಿಕ್, ಶ್ರೇಯಸ್ ಗೆ ನೋಟಿಸ್ ಕೊಟ್ಟಿಲ್ಲ, ರೇವಣ್ಣಗೆ ಮಾತ್ರ ನೋಟಿಸ್ ‌ಕೊಟ್ಟಿದ್ದಾರೆ. ಪ್ರಜ್ವಲ್ ಮಾಜಿ ಡ್ರೈವರ್ ಕಾರ್ತಿಕ್ ಬೆಂಗಳೂರಿನ ಗಿರಿನಗರದಲ್ಲೇ ಇದ್ದಾನೆ. ಆದರೆ ಅವರ ಬಂಧನಕ್ಕೆ ಯಾಕೆ ಮುಂದಾಗುತ್ತಿಲ್ಲ. ನಿಮ್ಮನ್ನು ಯಾರಾದರೂ ತಡೆಯುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

3. ಸಂಸದ ಜಿಎಂ ಸಿದ್ದೇಶ್ವರ ವಿರುದ್ಧ ಎಫ್ಐಆರ್

ಮತಗಟ್ಟೆಯೊಳಗೆ ಅಕ್ರಮವಾಗಿ ಮೊಬೈಲ್ ಕೊಂಡೊಯ್ದು ಮತದಾನ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿದ ಬಳ್ಳಾರಿ ನಗರ ಪಾಲಿಕೆ ಬಿಜೆಪಿ ಸದಸ್ಯನ ವಿರುದ್ಧ ಪ್ರಕರಣ ದಾಖಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಚುನಾವಣಾ ಆಯೋಗದ ನಿಯಮ ಉಲ್ಲಂಘಿಸಿದ್ದಕ್ಕಾಗಿ ವಾರ್ಡ್ ನಂ.10ರ ಕಾರ್ಪೊರೇಟರ್ ತಿಲಕ್ ಕುಮಾರ್ ವಿರುದ್ಧ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮತ್ತೊಂದೆಡೆ, ಗೌಪ್ಯ ಮತದಾನಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕಾಗಿ ದಾವಣಗೆರೆ ಬಿಜೆಪಿ ಸಂಸದ ಡಾ.ಜಿ.ಎಂ ಸಿದ್ದೇಶ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರು ಮತದಾನ ಮಾಡುವಾಗ ಮತಯಂತ್ರದ ಪಕ್ಕದಲ್ಲೇ ಸಂಸದರು ನಿಂತು ನೋಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ದ ಎಫ್ಐಆರ್ ದಾಖಲಾಗಿದೆ.

4. ಕಾಲೇಜಿನ ಮಹಿಳಾ ವಿಶ್ರಾಂತಿ ಕೊಠಡಿಯೊಳಗೆ ವಿಡಿಯೋ ಚಿತ್ರೀಕರಣ: ಅಪ್ತಾಪ್ತನ ಬಂಧನ

ಮಂಗಳೂರಿನ ಕಸ್ತೂರಬಾ ವೈದ್ಯಕೀಯ ಕಾಲೇಜಿನ ಮಹಿಳಾ ವಿಶ್ರಾಂತಿ ಕೊಠಡಿಯೊಳಗೆ ಮೊಬೈಲ್ ಫೋನ್, ಕ್ಯಾಮೆರಾ ಅಳವಡಿಸಿ ಚಿತ್ರಿಸುತ್ತಿದ್ದ ಆರೋಪದ ಮೇಲೆ 17 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಮೊಬೈಲ್ ರಿಂಗ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದ್ದು, ಭದ್ರತಾ ಸಿಬ್ಬಂದಿ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಕಾಲೇಜಿನ ಅಧಿಕಾರಿಗಳು ಫೋನ್ ಅನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು, ಫೋನ್‌ನಲ್ಲಿ ಲಭ್ಯವಾದ ವಿವರಗಳ ಆಧಾರದ ಮೇಲೆ ಅಪ್ರಾಪ್ತನನ್ನು ಬಂಧಿಸಲಾಗಿದೆ.

5. ಜೆಪಿ ನಡ್ಡಾ, ಅಮಿತ್ ಮಾಳವಿಯಾ ವಿಜಯೇಂದ್ರಗೆ ನೋಟಿಸ್

ಮೀಸಲಾತಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯುಳ್ಳ ವೀಡಿಯೊವನ್ನು ಬಿಜೆಪಿಯ ಅಧಿಕೃತ ಖಾತೆಯಡಿ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ಐಟಿ ಸೆಲ್ ನ ಮುಖ್ಯಸ್ಥ ಅಮಿತ್ ಮಾಳವೀಯ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜೇಯಂದ್ರಗೆ ಕರ್ನಾಟಕ ಪೊಲೀಸ್ ಇಲಾಖೆ ಸಮನ್ಸ್ ಜಾರಿ ಮಾಡಿದೆ. ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಪ್ರಕಟವಾಗಿದ್ದ ಅನಿಮೇಟೆಡ್ ವಿಡಿಯೋ ಪೋಸ್ಟ್ ನಲ್ಲಿ, ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಮುಸ್ಲಿಂ ಸಮುದಾಯ ಹಾಗೂ ST-SC ಸಮುದಾಯಗಳನ್ನು ಲೇವಡಿ ಮಾಡಲಾಗಿತ್ತು. ಇದರ ವಿರುದ್ಧ ಕರ್ನಾಟಕ ಕಾಂಗ್ರೆಸ್ ದೂರು ಸಲ್ಲಿಸಿತ್ತು.

6. ಸಾಹಿತಿ ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ

ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ, ಕಾದಂಬರಿಕಾರ ಪಾಲ್ತಾಡಿ ರಾಮರ್ಕಷ್ಣ ಆಚಾರ್ ಅವರು ಕಳೆದ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 79 ವರ್ಷದ ಪಾಲ್ತಾಡಿ ಅವರು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ರಿಜಿಸ್ಟ್ರಾರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಸಂಶೋಧನೆಯ ಮೂಲಕ ತುಳು ಭಾಷಾ ಪರಂಪರಣೆಯನ್ನು ರಕ್ಷಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆಚಾರ್ ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com