
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬುಧವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಬೆಳ್ಳಂಬೆಳಗ್ಗೆ ರಾಜಧಾನಿ ಬೆಂಗಳೂರಿನಲ್ಲಿ ತಂಪಾದ ವಾತಾವರಣ ಇದ್ದು, ನಗರದಾದ್ಯಂತ ವರುಣಾಗಮನದ ಮುನ್ಸೂಚನೆ ನೀಡಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗುಡುಗು, ಮಿಂಚು ಸಹಿತ ಮಳೆಯಾಗುವ ಸಂಭವವಿದ್ದು, ಗಾಳಿಯ ವೇಗ ಗಂಟೆಗೆ 30-40 ಕಿ.ಮೀ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವರ್ತೂರು, ಬ್ರೂಕ್‌ಫೀಲ್ಡ್, ಮಹದೇವಪುರ, ವೈಟ್‌ಫೀಲ್ಡ್, ಕಲ್ಯಾಣ ನಗರ, ಮಾರತ್ತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಬನಶಂಕರಿ, ಬಿಟಿಎಂ ಲೇಔಟ್, ಕೊತ್ನೂರು, ಗೊಟ್ಟಿಗೆರೆ, ಟಿಸಿ ಪಾಳ್ಯ, ಕೆಆರ್ ಪುರ, ಕುಮಾರಸ್ವಾಮಿ ಲೇಔಟ್, ಉತ್ತರಹಳ್ಳಿ, ಹೆಚ್‌ಎಸ್‌ಆರ್ ಲೇಔಟ್, ಮಡಿವಾಳ, ಹುಳಿಮಾವು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ತುಂತುರು ಮಳೆಯಾಗಿದೆ.
ಬಿರು ಬೇಸಿಗೆಯಿಂದ ಬಳಲಿದ್ದವರಿಗೆ ವರದಂತೆ ಮಳೆರಾಯ ಆಗಮಿಸಿದ್ದಾನೆ. ಮುಂದಿನ 48 ಗಂಟೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯ ಮನ್ಸೂಚನೆ ನೀಡಲಾಗಿದೆ. ಮಳೆಯ ಮುನ್ಸೂಚನೆ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ.
ಇಂದು ತುಮಕೂರು, ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಅದೇ ರೀತಿ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಹ ಮಳೆಯಾಗಲಿದ್ದು ರಾಜ್ಯ ಹವಾಮಾನ ಇಲಾಖೆ ಅಲರ್ಟ್ ಘೋಷಣೆ ಮಾಡಿದೆ.ಇಂದಿನಿಂದ 4 ದಿನಗಳ ಕಾಲ ಹಳೆ ಮೈಸೂರು ಭಾಗದಲ್ಲಿಯೂ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
Advertisement