ಪ್ರಜ್ವಲ್ ವಿರುದ್ಧ ಮತ್ತೊಂದು ಪ್ರಕರಣ!, ಸರ್ಕಾರದಿಂದ ಬರ ಪರಿಹಾರ ವಿತರಣೆ| ಈ ದಿನದ ಸುದ್ದಿ ಮುಖ್ಯಾಂಶಗಳು-10-05-2024

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರonline desk

1. ಪ್ರಜ್ವಲ್ ವಿರುದ್ಧ ಮತ್ತೊಂದು ಪ್ರಕರಣ

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಪ್ರಜ್ವಲ್ ವಿರುದ್ಧದ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ನಡೆಸುತ್ತಿರುವ SIT ಅಧಿಕಾರಿಗಳು ವಿಡಿಯೋದಲ್ಲಿದ್ದ ಕೆಲ ಮಹಿಳೆಯರನ್ನು ಸಂಪರ್ಕಿಸಿ ದೂರು ನೀಡುವಂತೆ ಹೇಳಿದ್ದರು. ಈ ಪೈಕಿ ಮಹಿಳೆಯೊಬ್ಬರು ಎಸ್ಐಟಿ ಅಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಆಧರಿಸಿ ಅಧಿಕಾರಿಗಳು ಐಪಿಸಿ ಸೆಕ್ಷನ್ 376 ನ್ನು ಸೇರ್ಪಡೆಗೊಳಿಸುವ ಮೂಲಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಈ ಮಧ್ಯೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ ಟ್ರೋಲ್ ಪೇಜ್ ಅಡ್ಮಿನ್ ಪ್ರಜ್ವಲ್ ಎಂಬಾತನನ್ನು ಚಿಕ್ಕಮಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

2. ನಮ್ಮ ಪೊಲೀಸರ ಮೇಲೆ ನನಗೆ ನಂಬಿಕೆಯಿದೆ: CBIಗೆ ಪ್ರಜ್ವಲ್ ಪ್ರಕರಣ ನೀಡುವ ಒತ್ತಾಯಕ್ಕೆ ಸಿಎಂ ಪ್ರತಿಕ್ರಿಯೆ

ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂಬ ಆಗ್ರಹದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ಎಲ್ಲಾ ಕ್ರಿಮಿನಲ್ ಕೇಸುಗಳನ್ನು ನಮ್ಮ ಪೊಲೀಸರು ತನಿಖೆ ನಡೆಸುತ್ತಾರೆ. ನಮ್ಮ ಪೊಲೀಸರ ಮೇಲೆ ನನಗೆ ನಂಬಿಕೆಯಿದೆ, ಸರಿಯಾದ ದಾರಿಯಲ್ಲಿ ತನಿಖೆ ನಡೆಯುತ್ತಿದೆ, SIT ನಿಷ್ಪಕ್ಷಪಾತ ತನಿಖೆ ಮಾಡಿ ವರದಿ ನೀಡುತ್ತೆ ಎಂದು ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಹಿಂದೆ ಸಿಬಿಐಗೆ ನೀಡಿದ್ದ ಡಿಕೆ ರವಿ ಕೇಸು ಏನಾಯಿತು? ಎಂದು ಪ್ರಶ್ನಿಸಿದ್ದಾರೆ. CBI ನ್ನು ಚೋರ್ ಬಚಾವ್ ಸಂಸ್ಥೆ ಎಂದು ದೇವೇಗೌಡರು ಹೇಳಿದ್ದರು. ಈಗ ನೋಡಿದರೆ ಸಿಬಿಐಗೆ ಕೊಡಿ ಎನ್ನುತ್ತಿದ್ದಾರೆ. ಇದರ ಅರ್ಥ ಏನು ಎಂದು ಪ್ರಶ್ನಿಸಿದರು. ಈಮಧ್ಯೆ, ಪ್ರಜ್ವಲ್ ವಿರುದ್ಧ ಸುಳ್ಳು ದೂರು ನೀಡುವಂತೆ ತಮಗೆ ಒತ್ತಡ ಹೇರಲಾಗಿತ್ತು ಎಂದು ಮಹಿಳೆಯೊಬ್ಬರು NCW ಗೆ ಹೇಳಿಕೆ ನೀಡಿದ್ದು, ಮಹಿಳೆಗೆ ಒತ್ತಡ ಹಾಕಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಲು ಎಸ್ ಐಟಿ ಮುಂದಾಗಿದೆ. ಎನ್ ಸಿಡಬ್ಲ್ಯು ಮಾಹಿತಿಯನ್ನು ಆಧರಿಸಿ ಎಸ್ ಐಟಿ ತಂಡ ತನಿಖೆ ಮುಂದುವರೆಸಿದೆ.

3. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೋರ್ವ NIA ವಶಕ್ಕೆ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಎನ್ಐಎ ಬಂಧಿಸಿದೆ. ಮುಸ್ತಫಾ ಪೈಚಾರ್ ಎಂಬಾತನನ್ನು ಇಂದು ಬೆಳಗ್ಗೆ ಹಾಸನ ಜಿಲ್ಲೆ ಸಕಲೇಶಪುರದ ಆನೆಮಹಲ್ ಆನೆ ಮಹಲ್ ಬಳಿ ಬಂಧಿಸಲಾಗಿದೆ ಎಂದು NIA ಹೇಳಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ 2002ರ ಜುಲೈ 26 ರಂದು ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಕಳೆದ ವರ್ಷ ಜನವರಿಯಲ್ಲಿ ಎನ್‌ಐಎ 21 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.

4. ಕೊಡಗು ಜಿಲ್ಲೆಯಲ್ಲಿ ವಿದ್ಯಾರ್ಥಿನಿ ಹತ್ಯೆ ಮಾಡಿದ್ದ ಆರೋಪಿಯ ಶವ ಪತ್ತೆ

ಕೊಡಗು ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿ ಪ್ರಕಾಶ್ ಮೃತ ದೇಹ ಪತ್ತೆಯಾಗಿದೆ. ಪ್ರಕಾಶ್ ಎಂಬಾತ ವಿದ್ಯಾರ್ಥಿನಿ ಮೀನಾಳ ತಲೆ ಕಡಿದು ಪರಾರಿಯಾಗಿದ್ದ. ಕೊಲೆ ಮಾಡಿದ ಬಳಿಕ ಆತ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸೂರ್ಲಬ್ಬಿ ಗ್ರಾಮದಿಂದ 3 ಕಿ.ಮೀ. ದೂರದ ಹಮ್ನಿಯಾಲದಲ್ಲಿ ಪ್ರಕಾಶ್ ಮೃತದೇಹ ಪತ್ತೆಯಾಗಿದೆ. ಬಾಲಕಿಯ ರುಂಡಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.

5. ರಾಜ್ಯ ಸರ್ಕಾರದಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬರ ಪರಿಹಾರ ವಿತರಣೆ-ಕಂದಾಯ ಸಚಿವ

ರಾಜ್ಯ ಸರ್ಕಾರ ಬರ ಪರಿಹಾರ ವಿತರಣೆಗೆ ಚಾಲನೆ ನೀಡಲು ಮುಂದಾಗಿದ್ದು, 16 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ತಲಾ 3,000 ರೂಪಾಯಿ ನೀಡಲು ನಿರ್ಧರಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೆಗೌಡ ಹೇಳಿದ್ದಾರೆ. 'ಒಣ ಬೇಸಾಯದಲ್ಲಿ ತೊಡಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಸುಮಾರು 16 ಲಕ್ಷ ಕುಟುಂಬಗಳಿವೆ. ಅವರು ಬರದಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಈ ಕುಟುಂಬಗಳಿಗೆ ತಲಾ 3 ಸಾವಿರ ರೂ. ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

6. ಬಳ್ಳಾರಿ: ಜಿಂದಾಲ್ ಕಾರ್ಖಾನೆಯಲ್ಲಿ ಕಾರ್ಮಿಕರ ಸಾವು

ಬಳ್ಳಾರಿಯ ತೋರಣಗಲ್ಲು‌ ಬಳಿ ಇರುವ ಜಿಂದಾಲ್ ಉಕ್ಕಿನ ಕಾರ್ಖಾನೆಯ ನೀರಿನ ಹೊಂಡದಲ್ಲಿ ಬಿದ್ದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ನೀರಿನ ಹೊಂಡಕ್ಕೆ ಜೋಡಿಸಲಾಗಿದ್ದ ಪೈಪ್ನಲ್ಲಿ ಸಮಸ್ಯೆ ಕಂಡು ಬಂದಿದ್ದು, ರಿಪೇರಿ ಮಾಡಲು ಮೂವರು ಹೋಗಿದ್ದಾರೆ. ಪೈಪ್ನಲ್ಲಿ ಬರುತ್ತಿದ್ದ ನೀರನ್ನು ನಿಲ್ಲಿಸದೆ ಹಾಗೆ ದುರಸ್ತಿ ಕಾರ್ಯ ಮಾಡುವಾಗ, ನೀರಿನ ರಭಸಕ್ಕೆ ಓರ್ವ ಕಾರ್ಮಿಕ ನೀರಿನ ಹೊಂಡದಲ್ಲಿ ಬಿದ್ದಿದ್ದಾನೆ. ಈತನನ್ನು ರಕ್ಷಿಸಲು ಹೋಗಿ ಇನ್ನಿಬ್ಬರು ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com