ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸು: ಮಾಜಿ ಶಾಸಕ ಪ್ರೀತಂಗೌಡ ಆಪ್ತರು ಎಸ್ ಐಟಿ ವಶಕ್ಕೆ
ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬರುತ್ತಿರುವ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿಶೇಷ ತನಿಖಾ ಅಧಿಕಾರಿಗಳು (SIT) ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ ಆಪ್ತ ಲಿಖಿತ್ ಮತ್ತು ಅವರ ಕಚೇರಿ ಸಿಬ್ಬಂದಿ ಚೇತನ್ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ನವೀನ್ ಗೌಡ ಮತ್ತು ಪುಟ್ಟರಾಜು ಎಂಬುವರಿಗಾಗಿ ಅಧಿಕಾರಿಗಳು ಹುಡುಕಾಟ ತೀವ್ರಗೊಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ್ ವಿಡಿಯೋಗಳು ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿದ್ದಂತೆ ಕಳೆದ ತಿಂಗಳು ಏಪ್ರಿಲ್ 23 ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (SIT) ರಚಿಸಿತು. ಬಳಿಕ ಪ್ರಕರಣ ಎಸ್ಐಟಿಗೆ ವರ್ಗಾವಣೆಯಾಯಿತು. ನಂತರ ಎಸ್ಐಟಿ ಹಲವು ತಂಡಗಳನ್ನು ರಚಿಸಿಕೊಂಡು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದೆ.
ಸದ್ಯ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ಹಾಸನದಲ್ಲಿ ಬೀಡು ಬಿಟ್ಟಿದೆ. ಈ ಅಶ್ಲೀಲ ವಿಡಿಯೋಗಳನ್ನು ಹರಿಬಿಟ್ಟವರನ್ನು ವಶಕ್ಕೆ ಪಡೆದುಕೊಳ್ಳುತ್ತಿದೆ. ಇದೀಗ ಅಧಿಕಾರಿಗಳು ಮಾಜಿ ಶಾಸಕ ಪ್ರೀತಂಗೌಡ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಹಾಗೂ ಆಪ್ತ ಲಿಖಿತ್ನನ್ನು ಪೆನ್ ಡ್ರೈವ್ ಇಟ್ಟುಕೊಂಡಿದ್ದ ಆರೋಪದ ಮೇಲೆ ವಶಕ್ಕೆ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ