
ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಿತಿಗಳು, ಬರಹಗಾರರು, ಮಹಿಳಾ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಪತ್ತೆ ಮಾಡಿ ಬಂಧಿಸಬೇಕು. ಕಾಲಮಿತಿಯಲ್ಲಿ ಎಸ್‌ಐಟಿ ತನಿಖೆ ನಡೆಯಬೇಕು ಎನ್ನುವುದು ಸೇರಿದಂತೆ 16 ಬೇಡಿಕೆಗಳನ್ನೊಳಗೊಂಡ ಬಹಿರಂಗ ಪತ್ರಕ್ಕೆ ಹಿರಿಯ ಲೇಖಕರಾದ ಡಾ. ವಿಜಯಾ, ಸಾಹಿತಿ ಡಾ.ಜಿ ರಾಮಕೃಷ್ಣ, ವಸುಂಧರಾ ಭೂಪತಿ, ಮೀನಾಕ್ಷಿ ಬಾಳಿ, ಕೆ ನೀಲಾ, ಕೆ.ಎಸ್ ವಿಮಲಾ, ಕುಂ ವೀರಭದ್ರಪ್ಪ, ಮುಜಫರ್ ಅಸ್ಸಾದಿ ಸೇರಿದಂತೆ ಒಟ್ಟು 107 ಮಂದಿ ಸಹಿ ಮಾಡಿದ್ದು, ‘ಪಜ್ಞಾವಂತ ನಾಗರಿಕರ ಬಹಿರಂಗ ಪತ್ರ’ ಎಂದು ಹೆಸರಿಸಲಾಗಿದೆ.
ಪ್ರಜ್ವಲ್ ರೇವಣ್ಣ ಪ್ರಕರಣವು ಅತ್ಯಂತ ಹೇಯವಾಗಿದ್ದು, ನಾಗರೀಕ ಸಮಾಜ ತಲೆತಗ್ಗಿಸುವಂತಹುದಾಗಿದೆ. 2900 ವಿಡಿಯೋ ಮತ್ತು ಫೋಟೋಗಳ ದಾಖಲೆ ಇಟ್ಟುಕೊಂಡಿರುವುದು, ಸಂತ್ರಸ್ತರು ದೂರು ನೀಡದಂತೆ ಬೆದರಿಸುವುದು, ಅಪಹರಿಸುವುದು, ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಹಗರಣವನ್ನು ಮಾಹಿತಿ ಇರುವ ಯಾರೊಬ್ಬರೂ ಕಾನೂನು ಪಾಲಕರಿಗೆ ತಿಳಿಸದೆ ಮುಚ್ಚಿಟ್ಟಿರುವುದು ಘೋರ ಅಪರಾಧ ಎಂದು ಹೇಳಿದ್ದಾರೆ.
ಈ ಹಗರಣವನ್ನು ರಾಜಕೀಯ ನಾಯಕರು ತಮ್ಮ ಹಿತಾಸಕ್ತಿ ಮತ್ತು ಚುನಾವಣೆಗೆ ಬಳಸುತ್ತಿರುವುದು ಮತ್ತಷ್ಟು ಆಘಾತಕಾರಿಯಾಗಿದೆ. ರಾಜಕೀಯ ಶಕ್ತಿಗಳ ಬೇಜವಾಬ್ದಾರಿ ನಡುವಳಿಕೆಯು ಮೂಲ ಅಪರಾಧ ಮತ್ತು ಅದರಿಂದ ಆಗಲಿರುವ ಪರಿಣಾಮಗಳನ್ನು ಗೌಣ ಮಾಡುತ್ತಿದೆ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣನ ತಾತ, ತಂದೆ, ತಾಯಿ, ಅಣ್ಣ, ಚಿಕ್ಕಪ್ಪ, ಚಿಕ್ಕಮ್ಮ ಪ್ರಜಾಪ್ರಭುತ್ವದ ಎಲ್ಲ ಹುದ್ದೆಗಳನ್ನು, ಸರ್ಕಾರದ ಎಲ್ಲ ಸವಲತ್ತುಗಳನ್ನು ಬಳಸಿಕೊಳ್ಳುತ್ತಾ ಬಂದಿದ್ದಾರೆ. ಕುಟುಂಬಸ್ಥರು ಪ್ರಜಾಪ್ರಭುತ್ವದ ಮುಸುಕಿನೊಳಗೆ, ಪ್ರಜಾಪ್ರತಿನಿಧಿಗಳೆಂಬ ಧಿರಿಸು ಧರಿಸಿ ನಡೆಸಿರುವ ಪಾಳೇಗಾರಿಕೆಯ ಆಡಳಿತ ನಡೆಸುತ್ತಾ ಬಂದಿದ್ದಾರೆ.
ಈ ಹಗರಣ ಬಯಲಾದರೂ ಹಾಸನ ಚುನಾವಣೆ ಸ್ಥಗಿತಗೊಳಿಸದೆ, ಆರೋಪಿಯನ್ನು ಚುನಾವಣೆಗೆ ಸ್ಪರ್ಧೆ ಮಾಡಲು ಬಿಟ್ಟಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಚಾರ. ಹಗರಣ ಬಯಲಾಗಿ ಏ.22 ರಿಂ 26ರ ವರೆಗೆ ಆರೋಪಿಯನ್ನು ಬಂಧಿಸಿಲ್ಲ. ಇದು ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡಿಸಿದೆ ಎಂದಿದ್ದರೆ.
ಸಾಹಿತಿಗಳ, ಬರಹಗಾರರ 16 ಬೇಡಿಕೆಗಳು
ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಪತ್ತೆ ಮಾಡಿ ಬಂಧಿಸಬೇಕು.
ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬಿ, ದೂರು ನೀಡುವ ವಾತಾವರಣ ನಿರ್ಮಾಣ ಮಾಡಬೇಕು.
ಹಗರಣದ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿರುವ ರಾಜಕೀಯ ನಾಯಕರ ನಡವಳಿಕೆಗೆ ಕಡಿವಾಣ ಹಾಕಬೇಕು.
ಎಸ್‌ಐಟಿ ತನಿಖೆ ಕಾಲಮಿತಿಯಲ್ಲಿ ನಡೆಯಬೇಕು.
ಲೈಂಗಿಕ ಕೃತ್ಯ ಚಿತ್ರೀಕರಣದಲ್ಲಿ ಭಾಗಿಯಾದವರನ್ನು ಪತ್ತೆ ಮಾಡಿ ಮೊಕದ್ದಮೆ ಹೂಡಬೇಕು.
ಕಾರು ಚಾಲಕ ಕಾರ್ತಿಕ್ನನ್ನು ಕೂಡಲೇ ಬಂಧಿಸಬೇಕು.
ವಿಡಿಯೋ ತಮ್ಮ ಬಳಿ ಇದೆ ಎಂದ ಹೇಳಿದ ರಾಜಕೀಯ ನಾಯಕ ಮತ್ತು ಕಾರು ಚಾಲಕ ಕಾರ್ತಿಕ್ ಗೌಡ ವಿರುದ್ಧ ಸಂಚು ರೂಪಿಸಿದ್ದಕ್ಕೆ ಸೂಕ್ತ ಕಾನೂನುಗಳ ಅಡಿಯಲ್ಲಿ ಮೊಕದ್ದಮೆ ಹೂಡಬೇಕು.
ವಿಡಿಯೋಗಳನ್ನು ಹಂಚಿದವರ ವಿರುದ್ಧ ಮಾನವ ಹಕ್ಕುಗಳಿಗೆ ಧಕ್ಕೆ, ಎಲೆಕ್ಷನ್ ಸ್ಯಾಬೊಟೇಜ್ ಮಾಡಲು ಸಂಚು ಮಾಡಿರುವ ಆರೋಪಗಳ ಮೇಲೆ ಕೇಸ್ ದಾಖಲಿಸಬೇಕು.
ವಿಡಿಯೋ ಕುರಿತು ಮಾಹಿತಿ ಇದ್ದರೂ ಪೊಲೀಸರಿಗೆ ಮಾಹಿತಿ ನೀಡಿಲ್ಲದ ಕಾರಣ ಅವರನ್ನು ಸಂಚಿನ ಭಾಗ ಎಂದು ಪರಿಗಣಿಸಬೇಕು.
ವಿಡಿಯೋ ಹಳೆಯದು ಎಂದು ಎಚ್ಡಿ ರೇವಣ್ಣ ಹೇಳಿದ್ದಾರೆ. ಅಷ್ಟು ವರ್ಷ ನಡೆಯುತ್ತಿರುವ ಲೈಂಗಿಕ ವಿಕೃತಿ ಮುಂದುವರೆಯಲು ಬಿಟ್ಟಿರುವ ಕುಟುಂಬ ಸದಸ್ಯರ ವಿರುದ್ಧವೂ ಮೊಕದ್ಧಮೆ ಹೂಡಬೇಕು.
ಆರೋಪಿ ದೇಶ ಬಿಟ್ಟು ಹೋಗಲು ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು.
ಪ್ರಜ್ವಲ್ ರೇವಣ್ಣ ಹುಳುಕುಗಳನ್ನು ಮುಚ್ಚಿಟ್ಟುಕೊಳ್ಳಲು ಪಡೆದ ಈ ತಡೆಯಾಜ್ಞೆಯಿಂದ ಜನರ ಹಕ್ಕಿನ ಉಲ್ಲಂಘನೆಯಾಗಿದ್ದು ಜನರ ಹಕ್ಕುಗಳ ಸಂರಕ್ಷಕನಾಗಿರುವ (ಕಸ್ಟೋಡಿಯನ್) ರಾಜ್ಯ ಸರ್ಕಾರವು ಈ ಕುರಿತು ಮೊಕದ್ದಮೆ ದಾಖಲಿಸಬೇಕು.
ಹೆಚ್ ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಅವರ ಶಿಫಾರಸ್ಸಿನ ಮೇರೆಗೆ ಹಾಸನ ಜಿಲ್ಲೆಯ ವಿವಿಧ ಕಚೇರಿಗಳಲ್ಲಿ ನೇಮಕಗೊಂಡಿರುವ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು.
ಎಸ್‌ಐಟಿ ತನಿಖೆ ಪೂರ್ಣಗೊಳ್ಳುವವರೆಗೆ ಹೆಚ್ ಡಿ ರೇವಣ್ಣ ಅವರ ವಿಧಾನಸಭೆ ಸದಸ್ಯತ್ವವನ್ನು ತಾತ್ಕಾಲಿಕವಾಗಿ ರದ್ದುಪಡಿಸಬೇಕು.
ಈ ಆರೋಪಿಗಳ ನಡೆಯು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದೆ. ಸರ್ಕಾರಿ ಬಂಗ್ಲೆಯನ್ನು ಅಪರಾಧ ಕೃತ್ಯಕ್ಕೆ ಬಳಸಿರುವುದಕ್ಕೆ ಮೊಕದ್ದಮೆ ಹೂಡಬೇಕು.
ಈ ಕುಟುಂಬಕ್ಕೆ ಒದಗಿಸಲಾಗಿರುವ ಎಲ್ಲ ಸರ್ಕಾರಿ ಸವಲತ್ತುಗಳನ್ನು ಈ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂಬ ಬೇಡಿಕೆಗಳುಳ್ಳ ಪತ್ರವನ್ನು ಬರೆದಿದ್ದಾರೆ.
Advertisement