
ಬೆಂಗಳೂರು: ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು, ವಿದೇಶದಲ್ಲಿದ್ದುಕೊಂಡು ಕಣ್ಣಾಮುಚ್ಚಾಲೆ ಆಟ ಮುಂದುವರಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು ಜರ್ಮನ್ನ ಮ್ಯೂನಿಚ್ನಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಈ ಟಿಕೆಟ್ ನ್ನು ಕ್ಯಾನ್ಸಲ್ ಮಾಡಿದ್ದ ಅವರು, ಮತ್ತೆ ಬುಕ್ ಮಾಡಿದ್ದಾರೆಂದು ತಿಳಿದುಬಂದಿದೆ.
ಲುಪ್ತಾನ್ಸಾ ವಿಮಾನದಲ್ಲಿ ಕ್ಯಾನ್ಸಲ್ ಮಾಡಿದ್ದ ಟಿಕೆಟ್ ನ್ನು ಮತ್ತೆ ಬುಕ್ ಮಾಡಿದ್ದಾರೆಂದು ತಿಳಿದುಬಂದಿದೆ. ಈ ವಿಮಾನ ಇಂದು ಮಧ್ಯಾಹ್ನ 2 ಗಂಟೆಗೆ ಹೊರಡಲಿದ್ದು, ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಲಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಪ್ರಜ್ವಲ್ ಅವರು ಬುಕ್ ಮಾಡಿದ್ದ ಟಿಕೆಟ್ ನ್ನು ರದ್ದು ಮಾಡಿದ್ದರು. ಆದರೂ ಅದರ ಹಣ ವಾಪಸ್ ಪಡೆಯದೆ ಗೊಂದಲ ಮೂಡಿಸಿದ್ದರು. ಯಾವುದೇ ಕ್ಷಣದಲ್ಲಾದರೂ ಮತ್ತೆ ಟಿಕೆಟ್ ಖರೀದಿಸಲು ಪ್ರಜ್ವಲ್ ಈ ತಂತ್ರ ಹೂಡಿರಬಹುದು ಎಂದು ಹೇಳಲಾಗುತ್ತಿತ್ತು.
ಪ್ರಜ್ವಲ್ ರೇವಣ್ಣ ಅವರ ಚಲನ ವಲನಗಳ ಮೇಲೆ ಎಸ್ಐಟಿ ತಂಡ ನಿಗಾ ಇಟ್ಟಿದ್ದು, ಬೇರೆ ವಿಮಾನದಲ್ಲಿ ಟಿಕೆಟ್ ಬುಕ್ ಆಗುತ್ತದೆಯೇ, ಆಗಿದೆಯೇ ಎಂದು ಪರಿಶೀಲನೆ ಆರಂಭಿಸಿದ್ದರು. ಇದರಂತೆ ಮರಳಿ ಟಿಕೆಟ್ ಬುಕ್ ಆಗಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಎಸ್ಐಟಿ ತಂಡ ಬೀಡುಬಿಟ್ಟಿದೆ.
ಪ್ರಜ್ವಲ್ ಅವರು 3.5 ಲಕ್ಷ ರೂ. ಮೊತ್ತದ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಅನ್ನು ಬುಕ್ ಮಾಡಿದ್ದಾರೆಂದು ತಿಳಿದುಬಂದಿದೆ.
ಪ್ರಜ್ವಲ್ ಅವರು 2 ಬಾರಿ ಟಿಕೆಟ್ ಕ್ಯಾನ್ಸಲ್ ಮಾಡಿದ್ದರು. ಮೇ 03 ಮತ್ತು 15 ರಂದು ಭಾರತಕ್ಕೆ ಬರಲು ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದರು.
Advertisement