
ಮಡಿಕೇರಿ: ಕೊಡಗಿನಲ್ಲಿ ಬರ್ಬರವಾಗಿ ಹತ್ಯೆಗೀಡಾದ 16 ವರ್ಷದ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಮೀನಾ ಪ್ರಕರಣದಲ್ಲಿ ತ್ವರಿತ ನ್ಯಾಯ ಒದಗಿಸಲು ವಿಶೇಷ ಅಭಿಯೋಜಕರನ್ನು ನೇಮಿಸುವುದಾಗಿ ಗೃಹ ಸಚಿವ ಜಿ.ಪರಮೇಶ್ವರ ಅವರು ಗುರುವಾರ ಭರವಸೆ ನೀಡಿದ್ದಾರೆ.
ಪರಮೇಶ್ವರ ಅವರು ಇಂದು ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿ ಗ್ರಾಮದ ಬಾಲಕಿ ಮೀನಾಳ ಮನೆಗೆ ಭೇಟಿ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಈ ಕ್ರೂರ ಕೃತ್ಯವನ್ನು ಯಾರೂ ಜೀರ್ಣಿಸಿಕೊಳ್ಳಲು ಅಥವಾ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮೀನಾಳನ್ನು ವಾಪಸ್ ಕರೆತರಲು ಸಾಧ್ಯವಿಲ್ಲ. ಆದರೆ ಕುಟುಂಬಕ್ಕೆ ಶೀಘ್ರ ನ್ಯಾಯ ದೊರಕಿಸಿಕೊಡಲು ಸರ್ಕಾರ ಶ್ರಮಿಸಲಿದೆ ಎಂದು ಹೇಳಿದರು.
ಪ್ರಕರಣದ ತ್ವರಿತ ವಿಚಾರಣೆಗಾಗಿ ಸರ್ಕಾರದಿಂದ ವಿಶೇಷ ಅಭಿಯೋಜಕರನ್ನು ನೇಮಿಸಲು ಕ್ರಮಕೈಗೊಳ್ಳಲಾಗುವುದು ಮತ್ತು ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ. ಆರೋಪಿಗಳಿಗೆ ಕಾನೂನಿನ ಪ್ರಕಾರ ಕಠಿಣ ಮತ್ತು ತ್ವರಿತ ಶಿಕ್ಷೆ ನೀಡಲಾಗುವುದು ಎಂದು ಪರಮೇಶ್ವರ ಭರವಸೆ ನೀಡಿದರು.
ಸೂರ್ಲಬ್ಬಿ ಸಮೀಪದ ಕುಂಬಾರಗಡಿಗೆಯಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾದ ಬಳಿಕ 10ನೇ ತರಗತಿ ಪಾಸ್ ಆಗಿದ್ದ ಮೀನಾ ಅವರನ್ನು 34 ವರ್ಷದ ಪ್ರಕಾಶ್ ಓಂಕಾರಪ್ಪ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದರು.
Advertisement