
ಬೆಂಗಳೂರು: ಮೈಸೂರು–ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಬಸ್ ಚಾಲನೆ ಮಾಡಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ರಾಜ್ಯ ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಆಗ್ರಹಿಸಿದ್ದಾರೆ.
ಚಾಲಕನ ಅಜಾಗರೂಕ ಹಾಗೂ ಅಶಿಸ್ತಿನ ನಡವಳಿಕೆ ಕುರಿತು ಅಲೋಕ್ ಕುಮಾರ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಮ್ಮ ಎಲ್ಲ ಸಿಸಿಟಿವಿಗಳು ಅವುಗಳ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿವೆ. ಮೇ 11 ರಂದು ಚನ್ನಪಟ್ಟಣ ಬಳಿ ಕೆಎಸ್‌ಆರ್‌ಟಿಸಿ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಾ ಬಸ್ ಚಾಲನೆ ಮಾಡಿದ್ದಾರೆ ಎಂದು ಫೋಟೊ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ.
ಹೈವೇನಲ್ಲಿ ನಮ್ಮ ಪೊಲೀಸ್ ಕ್ಯಾಮೆರಾಗಳು ತಮ್ಮ ಕೆಲಸ ಮಾಡುತ್ತಿವೆ. ಕೇವಲ 15 ದಿನದಲ್ಲಿ 12,192 ಸಂಚಾರ ನಿಯಮ ಉಲ್ಲಂಘನೆಗಳನ್ನು ಸೆರೆ ಹಿಡಿದಿವೆ. ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತವಾದರೆ ಅದನ್ನು ಕುಟುಂಬದವರು ಸಹಿಸಿಕೊಳ್ಳಲು ಸಾಧ್ಯವೇ? ಒಮ್ಮೆ ಯೋಚಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೆ, ಕೆಎಸ್‌ಆರ್‌ಟಿಸಿ ಚಾಲಕನ ವಿರುದ್ಧ ಸಂಸ್ಥೆ ಕ್ರಮ ಕೈಗೊಳ್ಳಬೇಕು ಎಂದು ಬಸ್‌ನ ವಿವರ ಹಾಗೂ ದಂಡದ (ರೂ.1,500) ವಿವರಗಳನ್ನು ಅಲೋಕ್ ಕುಮಾರ್ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಕಾರಿನಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಹೋಗುತ್ತಿರುವ ಇತರ ಕೆಲವರ ಫೋಟೊಗಳನ್ನೂ ಹಂಚಿಕೊಂಡಿದ್ದಾರೆ.
ಈ ಮೂಲಕ ಯಾವುದೇ ಸಂಚಾರ ಉಲ್ಲಂಘನೆಗಳನ್ನೂ ನಾವು ಸಹಿಸುವುದಿಲ್ಲ ಎಂದು ಅವರು ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಅಲೋಕ್ ಕುಮಾರ್ ಅವರ ಈ ಆಗ್ರಹಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರತಿಕ್ರಿಯೆ ನೀಡಿದ್ದು, ಸಲಹೆಗಾಗಿ ಧನ್ಯವಾದಗಳು ಸರ್, ನಿಯಮ ಉಲ್ಲಂಘಿಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಡಿಪೋ ಮತ್ತು ವಿಭಾಗಕ್ಕೆ ಸೂಚಿಸಲಾಗಿದೆ ಎಂದು ಹೇಳಿದೆ.
Advertisement