
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರು ಮೊಬೈಲ್ ಫ್ಲಾಶ್ ಲೈಟ್ ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿರುವ ಬೆನ್ನಲ್ಲೇ ಈ ಬಗ್ಗೆ ಕಿಡಿಕಾರಿರುವ ವಿಪಕ್ಷ ಬಿಜೆಪಿ, ಕಾಂಗ್ರೆಸ್ ಸರ್ಕಾರದಿಂದ ರೋಗಿಗಗಳಿಗೆ ''ಕತ್ತಲೆ ಭಾಗ್ಯ'' ಎಂದು ಕಿಡಿಕಾರಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದೆ ವೈದ್ಯರು ಕ್ಯಾಂಡಲ್ ಹಚ್ಚಿ, ಮೊಬೈಲ್ ಫ್ಲಾಶ್ ಲೈಟ್ ಆನ್ ಮಾಡಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮೊಳಕಾಲ್ಮೂರು ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ವಿದ್ಯುತ್ ಪೂರೈಕೆ ಆಗಾಗ ಸ್ಥಗಿತವಾಗುತ್ತಿರುತ್ತದೆ. ಹೀಗಾಗಿ ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ನಿತ್ಯ ಪರದಾಡುವಂತಾಗಿದೆ.
ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿ ಇದೇ ಪರಿಸ್ಥಿತಿ ಇದ್ದು ಸತತ ದೂರಿನ ಹೊರತಾಗಿಯೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕ ಆಸ್ಪತ್ರೆಯಲ್ಲಿನ ಜನರೇಟರ್ ಕೆಟ್ಟು 7 ದಿನಗಳಾಗಿವೆ. ದುರಸ್ಥಿ ಮಾಡಿಸುವ ಕೆಲಸವನ್ನು ಆಸ್ಪತ್ರೆಯ ಮೇಲಾಧಿಕಾರಿಗಳಾಗಲಿ ಅಥವಾ ಅಲ್ಲಿನ ಶಾಸಕರಾಗಲಿ ಮುಂದೆ ಬಂದಿಲ್ಲ ಎನ್ನಲಾಗಿದೆ.
ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಮೊಬೈಲ್ ಫೋನ್‌ನ ಫ್ಲಾಶ್ ಲೈಟ್ ಬಳಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ ಮತ್ತು ಮೆಡಿಕಲ್ ಸ್ಟೋರ್, ಸಿಬ್ಬಂದಿ ಕೂಡ ರೋಗಿಗಳಿಗೆ ಔಷಧಿಗಳನ್ನು ನೀಡಲು ಮೊಬೈಲ್ ಫೋನ್‌ನ ಫ್ಲ್ಯಾಷ್ ಲೈಟ್ ಅನ್ನು ಅವಲಂಬಿಸಿದ್ದಾರೆ.
ಮೊಳಕಾಲ್ಮುರು ಪಟ್ಟಣದಲ್ಲಿರುವ 100 ಹಾಸಿಗಳ ಸರ್ಕಾರಿ ಆಸ್ಪತ್ರೆ ಇದಾಗಿದೆ. ಇಂತಹ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದ ಕಾರಣ ಅಲ್ಲಿನ ವೈದ್ಯರು ಹಾಗೂ ನರ್ಸ್ ಸಿಬ್ಬಂದಿಗಳು ಮೇಣದಬತ್ತಿ ಹಚ್ಚಿಕೊಂಡು ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಈ ಹಿಂದೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರು ಶಾಸಕನಾಗಿದ್ದ ಅವಧಿಯಲ್ಲಿ ಇದೇ ಆಸ್ಪತ್ರೆಯಲ್ಲಿ 23 ಬೆಡ್‌ಗಳ ಐಸಿಯು, ಆಕ್ಸಿಜನ್ ಪ್ಲಾಂಟ್, ಏರ್ಪ್ಲೋ ಆಪರೇಶನ್ ಥೇಟರ್, ಎಲ್ಲಾ ಬೆಡ್‌ಗಳಿಗೂ ಆಕ್ಸಿಜನ್ ಕನೆಕ್ಟಿವಿಟಿ, 12ಕ್ಕೂ ಹೆಚ್ಚು ತಜ್ಞ ವೈದ್ಯರು, ಜನೌಷಧಿ ಕೇಂದ್ರ ಸ್ಥಾಪನೆ, ಹೆಚ್ಚುವರಿ ಆಂಬ್ಯುಲೆನ್ಸ್‌ನಂತಹ ಕಾರ್ಯಗಳನ್ನು ಮಾಡಿದ್ದರು.
ಗೃಹಜ್ಯೋತಿ ಎಫೆಕ್ಟ್, ಕತ್ತಲೆ ಭಾಗ್ಯ ಎಂದ ಬಿಜೆಪಿ
ಇನ್ನು ಘಟನೆಯನ್ನು ತೀವ್ರವಾಗಿ ಖಂಡಿಸಿರುವ ವಿಪಕ್ಷ ಬಿಜೆಪಿ, ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಮನೆಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ಆಡಳಿತಾರೂಢ ಕಾಂಗ್ರೆಸ್‌ನ ಯೋಜನೆಗೆ ಇದು ಸಾಕ್ಷಿಯಾಗಿದ್ದು, ಕಾಂಗ್ರೆಸ್ ಸರ್ಕಾರದ 'ಕತ್ತಲೆ ಭಾಗ್ಯ' ಎಂದು ಕರೆದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ''ಒಂದು ವರ್ಷದ ಗ್ಯಾರಂಟಿ ಕತ್ತಲು ಭಾಗ್ಯ ಇದು ವರ್ಷದ ಸಂಭ್ರಮಾಚರಣೆಯಲ್ಲಿರುವ ಕಾಂಗ್ರೆಸ್ ಸರ್ಕಾರದ ಉಡುಗೊರೆ! ಸಿಎಂ ಸಿದ್ದರಾಮಯ್ಯ ಸರ್ಕಾರ ಇಂದು ಆಸ್ಪತ್ರೆಗಳಿಗೂ ಕರೆಂಟ್ ಪೂರೈಸದಷ್ಟು ಹೀನಾಯ ಸ್ಥಿತಿಗೆ ಬಂದು ತಲುಪಿದೆ. ಖಜಾನೆ ಖಾಲಿ, ವಿದ್ಯುತ್ ಖಾಲಿ ! ಇದು ಖಚಿತನೇ ಉಚಿತನೇ ನಿಶ್ಚಿತನೇ ಚಿಪ್ಪು ಚೊಂಬು!'' ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.
Advertisement