
ಬೆಂಗಳೂರು: ಕರ್ನಾಟಕದಲ್ಲಿರುವ 17,000 ಕ್ಕೂ ಹೆಚ್ಚು ಅಧಿಕೃತ ಖಾಸಗಿ ಶಾಲೆಗಳ ಪಟ್ಟಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಡಿಎಸ್‌ಇಎಲ್) ಗುರುವಾರ ಬಿಡುಗಡೆ ಮಾಡಿದೆ.
ಆದರೆ ಅವುಗಳಲ್ಲಿ ಎಷ್ಟು ಶಾಲೆಗಳಿಗೆ ಇಲಾಖೆಯ ಒಪ್ಪಿಗೆ ಸಿಕ್ಕಿಲ್ಲ ಎಂಬ ಬಗ್ಗೆ ಯಾವುದೇ ಸೂಚನೆ ನೀಡದ ಕಾರಣ, ಈಗಾಗಲೇ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯವೇನು ಎಂಬ ಬಗ್ಗೆ ಪೋಷಕರು ಆತಂಕದಲ್ಲಿದ್ದಾರೆ. ಡಿಎಸ್‌ಇಎಲ್‌ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಪಟ್ಟಿಯು ಜಿಲ್ಲಾವಾರು ಶಾಲೆಗಳ ಹೆಸರುಗಳನ್ನು ಪ್ರಕಟಿಸುತ್ತದೆ, ಅದರ ಅಡಿಯಲ್ಲಿ ಬ್ಲಾಕ್ ಆಯ್ಕೆ ಮಾಡಬೇಕು ಮತ್ತು ಅವರ ಮಗುವಿನ ಶಾಲೆಯು ಅಧಿಕೃತವಾಗಿದೆಯೇ ಎಂದು ನೋಡಲು ಪಟ್ಟಿ ಮಾಡಲಾದ ಹೆಸರುಗಳ ಸರಣಿಯನ್ನು ನೋಡಬೇಕು ಜೊತೆಗೆ ಅನುಮತಿ ನೀಡಿದ ಅವಧಿಯನ್ನು ಪರಿಶೀಲಿಸಬೇಕು. ಪಟ್ಟಿಯಲ್ಲಿ ಶಾಲೆಯು ನೀಡಬಹುದಾದ ಬೋರ್ಡ್‌ಗಳು ಮತ್ತು ತರಗತಿಗಳನ್ನು ಸಹ ಉಲ್ಲೇಖಿಸುತ್ತದೆ.
ಬೆಂಗಳೂರು ಒಂದರಲ್ಲೇ, 3,064 ಶಾಲೆಗಳು ಅನುಮೋದನೆಯ ಮುದ್ರೆಯನ್ನು ಪಡೆದಿದ್ದು, ಬೆಂಗಳೂರು ದಕ್ಷಿಣ- 1,312 ಉತ್ತರ- 1,302 ಮತ್ತು ಗ್ರಾಮಾಂತರದಲ್ಲಿ 449 ಗರಿಷ್ಠ ಶಾಲೆಗಳಿವೆ. ಎಷ್ಟು ಶಾಲೆಗಳನ್ನು ತಿರಸ್ಕರಿಸಲಾಗಿದೆ ಎಂಬುದರ ಕುರಿತು ನಿಖರವಾದ ಸಂಖ್ಯೆಯನ್ನು ಪಡೆಯಲು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವುಗಳ ಒಟ್ಟು ನಿಖರ ಸಂಖ್ಯೆ ದೊರೆತಿಲ್ಲ ಎಂದು ತಿಳಿದು ಬಂದಿದೆ.
ಡಿಎಸ್‌ಇಎಲ್‌ನ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಮಾರ್ ಸಿಂಗ್ ಮಾತನಾಡಿ “ನಾವು ಅನಧಿಕೃತ ಪಟ್ಟಿಯನ್ನು ನೀಡುತ್ತಿಲ್ಲ. ಬದಲಾಗಿ ನಾವು ಸಕಾರಾತ್ಮಕ ನಿರ್ಮಾಣಕ್ಕೆ ಹೋಗುತ್ತಿದ್ದೇವೆ ಇದರಿಂದ ಯಾವ ಶಾಲೆಗಳು ಅಧಿಕೃತವಾಗಿವೆ ಎಂಬುದನ್ನು ಪೋಷಕರು ತಿಳಿದುಕೊಳ್ಳಬಹುದು. ಇದು ಈ ಶೈಕ್ಷಣಿಕ ವರ್ಷದಿಂದಲೇ ಅನ್ವಯವಾಗಲಿದೆ. ನಾವು ಪೋಷಕರನ್ನು ಎಚ್ಚರಿಸಲು ಬಯಸುತ್ತೇವೆ ಮತ್ತು ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಬಗ್ಗೆ ಅವರಿಗೆ ತಿಳಿಸಲು ಬಯಸುತ್ತೇವೆ. ಅನಧಿಕೃತ ಶಾಲೆಗಳಲ್ಲಿ ಪ್ರವೇಶಗಳು ಕಡಿಮೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ಮಕ್ಕಳ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಪಟ್ಟಿಯಲ್ಲಿಲ್ಲದ ಶಾಲೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರಕರಣದ ಸೂಕ್ತ ಅಧ್ಯಯನ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು. ಶೈಕ್ಷಣಿಕ ವರ್ಷವು ಮೇ 28 ರಂದು ಪ್ರಾರಂಭವಾಗಲಿದೆ ಎಂದರು. ಏತನ್ಮಧ್ಯೆ, ಕರ್ನಾಟಕ (ಕೆಎಎಂಎಸ್) ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ಗಳ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಡಿ ಮಾತನಾಡಿ,ಅಧಿಕೃತ ಶಾಲೆಗಳ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡುವ ಇಲಾಖೆಯ ಉದ್ದೇಶದ ಬಗ್ಗೆ ಪ್ರಶ್ನಿಸಿದ್ದಾರೆ. ಕೆಲವು ಶಾಲಾ ಮಾಲೀಕರ ಹಿತಾಸಕ್ತಿ ಕಾಪಾಡಲು ಈ ರೀತಿ ಮಾಡಲಾಗುತ್ತಿದೆ, ಇದು ಆಡಳಿತದ ವೈಫಲ್ಯ ಎಂದು ಆರೋಪಿಸಿದ್ದಾರೆ.
ಎನ್‌ಜಿಒ ಚೈಲ್ಡ್ ರೈಟ್ಸ್ ಟ್ರಸ್ಟ್ (ಸಿಆರ್‌ಟಿ) ಸರ್ಕಾರವು ಪೋಷಕರಿಗಾಗಿ ಸಹಾಯವಾಣಿಯನ್ನು ಪ್ರಾರಂಭಿಸಬೇಕು ಮತ್ತು ಶಾಲೆಯು ಅಧಿಕೃತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸಹಾಯ ಮಾಡಬೇಕು ಎಂದು ಸಲಹೆ ನೀಡಿದೆ. ಸಿಆರ್‌ಟಿ ನಿರ್ದೇಶಕ ನಾಗಸಿಂಹರಾವ್ ಮಾತನಾಡಿ, ‘ಗ್ರಾಮೀಣ ಪ್ರದೇಶದ ಅನೇಕ ಪಾಲಕರು ವೆಬ್‌ಸೈಟ್‌ಗೆ ಪ್ರವೇಶಿಸಲು ಮತ್ತು ತಾಲ್ಲೂಕುವಾರು ಡೇಟಾವನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಜೂನ್ ತಿಂಗಳಿಗೆ ಸಹಾಯವಾಣಿಯನ್ನು ಪ್ರಾರಂಭಿಸುವುದು ಪ್ರಯೋಜನಕಾರಿಯಾಗಲಿದೆ. ಶಾಲೆಯು ಇನ್ನೂ ಅನುಮತಿ ಹೊಂದಿದೆ ಎಂದು ಹೇಳಿಕೊಳ್ಳುವುದರಿಂದ ಹಲವಾರು ಪೋಷಕರು ವಿಷಯ ತಿಳಿದುಕೊಳ್ಳಲು ನಮ್ಮ ಬಳಿ ಬಂದಿದ್ದರು ಎಂದು ಅವರು ತಿಳಿಸಿದ್ದಾರೆ.
Advertisement