ರಾಸಲೀಲೆ ಪ್ರಕರಣ: ಪ್ರಜ್ವಲ್ ರೇವಣ್ಣಗೆ MEA ಶೋಕಾಸ್ ನೋಟಿಸ್; ಬೆಂಗಳೂರು ರೇವ್ ಪಾರ್ಟಿ ಪ್ರಕರಣ: ಹೆಬ್ಬಗೋಡಿ ASI ಸೇರಿ ನಾಲ್ವರ ಅಮಾನತು! ಇಂದಿನ ಸುದ್ದಿ ಮುಖ್ಯಾಂಶಗಳು 24-05-24

ರಾಸಲೀಲೆ ಪ್ರಕರಣ: ಪ್ರಜ್ವಲ್ ರೇವಣ್ಣಗೆ MEA ಶೋಕಾಸ್ ನೋಟಿಸ್; ಬೆಂಗಳೂರು ರೇವ್ ಪಾರ್ಟಿ ಪ್ರಕರಣ: ಹೆಬ್ಬಗೋಡಿ ASI ಸೇರಿ ನಾಲ್ವರ ಅಮಾನತು! ಇಂದಿನ ಸುದ್ದಿ ಮುಖ್ಯಾಂಶಗಳು 24-05-24

1. ಪ್ರಜ್ವಲ್ ರೇವಣ್ಣಗೆ MEA ಶೋಕಾಸ್ ನೋಟಿಸ್

ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೋ ಬಹಿರಂಗವಾದ ನಂತರ ವಿದೇಶಕ್ಕೆ ಪರಾರಿಯಾಗಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣಗೆ ವಿದೇಶಾಂಗ ಸಚಿವಾಲಯ ಶುಕ್ರವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದುಗೊಳಿಸುವಂತೆ ಪ್ರಕರಣ ತನಿಖೆ ನಡೆಸುತ್ತಿರುವ ಎಸ್ಐಟಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆದಿದ್ದರು. ಇದರ ಬೆನ್ನಲ್ಲೆ ಇಂದು ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ವಿದೇಶಕ್ಕೆ ತೆರಳಲು ಕಾರಣವೇನು? ಆರೋಪದ ಬಗ್ಗೆ ಹಾಗೂ ತನಿಖೆಗೆ ಯಾವಾಗ ಹಾಜರಾಗುತ್ತೀರಿ? ಮತ್ತು ಪಾಸ್ಪೋರ್ಟ್ ರದ್ದುಗೊಳಿಸುವ ಬಗ್ಗೆ ಉತ್ತರಿಸುವಂತೆ ಸೂಚಿಸಲಾಗಿದೆ.

2. ಲೋಕಸಭೆ ಚುನಾವಣೆ ನಂತರ ಜಿಲ್ಲಾ-ತಾಲೂಕು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ

ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಕೊನೆಗೂ ಮನಸ್ಸು ಮಾಡಿದ್ದು, ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಚುನಾವಣೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಸಿಎಂ, ಲೋಕಸಭಾ ಚುನಾವಣೆ ಫಲಿತಾಂಶ ನಂತರ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ಗಳಿಗೆ ಚುನಾವಣೆ ನಡೆಸಲಾಗುವುದು ಮತ್ತು ಡಿಲಿಮಿಟೇಶನ್ ಪ್ರಕ್ರಿಯೆ ಮುಗಿದ ಬಳಿಕ ಬೃಹತ್ ಬೆಂಗಳೂರು ಮಹಾನಹರ ಪಾಲಿಕೆಗೂ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ತಮ್ಮ ಪುತ್ರ ಯತೀಂದ್ರ ಅವರನ್ನು ವಿಧಾನ ಪರಿಷತ್ ಸದಸ್ಯ ಮಾಡುವ ಬಗ್ಗೆ ಹಬ್ಬಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿದ ಸಿಎಂ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯತೀಂದ್ರ ತಮಗಾಗಿ ವರುಣ ಕ್ಷೇತ್ರ ಬಿಟ್ಟುಕೊಟ್ಟಾಗಲೇ ಪಕ್ಷದ ಹೈಕಮಾಂಡ್ ಅವರನ್ನು ವಿಧಾನ ಪರಿಷತ್ ಸದಸ್ಯನಾಗಿ ಮಾಡುವ ಭರವಸೆ ನೀಡಿತ್ತು. ಈಗಲೂ ಅದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದರು.

3. ಬೆಂಗಳೂರು ರೇವ್ ಪಾರ್ಟಿ ಪ್ರಕರಣ: ಹೆಬ್ಬಗೋಡಿ ASI ಸೇರಿ ನಾಲ್ವರ ಅಮಾನತು!

ಇತ್ತೀಚೆಗೆ ಬೆಂಗಳೂರು ಹೊರ ವಲಯದ ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದವರ ರಕ್ತದ ಮಾದರಿಗಳ ಫಲಿತಾಂಶ ಬಂದಿದ್ದು, ತೆಲುಗು ಚಿತ್ರರಂಗದ ನಟಿ ಸೇರಿದಂತೆ 86 ಮಂದಿ ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬರ್ತ್ ಡೇ ಪಾರ್ಟಿ ನೆಪದಲ್ಲಿ ಆಯೋಜಿಸಲಾಗಿದ್ದ ರೇವ್ ಪಾರ್ಟಿಯಲ್ಲಿ ಒಟ್ಟು 103 ಮಂದಿ ಪಾಲ್ಗೊಂಡಿದ್ದರು. ಇದೇ ಪ್ರಕರಣ ಸಂಬಂಧ ಮಾಹಿತಿ ಕಲೆ ಹಾಕಲು ವಿಫಲವಾಗಿರುವ ಆರೋಪದ ಮೇಲೆ ಹೆಬ್ಬಗೋಡಿ ಪೊಲೀಸ್ ಠಾಣೆಯ ASI ನಾರಾಯಣಸ್ವಾಮಿ, ಎಸ್ ಬಿ ಗಿರೀಶ್, ಗಸ್ತು ಸಿಬ್ಬಂದಿ ಕಾನ್ಸ್ ಟೇಬಲ್ ದೇವರಾಜು ಅವರನ್ನು ಅಮಾನತು ಮಾಡಲಾಗಿದೆ.

4. ರಾಜ್ಯದಲ್ಲಿ ಪ್ರತ್ಯೇಕ ಅಪಘಾತ: ಏಳು ಮಂದಿ ಸಾವು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಓಮಿನಿ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ಚಿತ್ರದುರ್ಗ ಮೂಲದವರು ಎನ್ನಲಾಗಿದೆ. ಕುಟುಂಬವೊಂದು ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿ ದರ್ಶನ ಪಡೆದು ವಾಪಾಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಮತ್ತೊಂದೆಡೆ, ಹಾವೇರಿಯಿಂದ ತಿರುಪತಿಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸರ್ವಿಸ್ ರೋಡ್‌ಗೆ ಬಿದ್ದು, ನಾಲ್ವರು ಸಾವನ್ನಪ್ಪಿರುವ ಘಟನೆ ರಾಣೆಬೆನ್ನೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಹಲಗೇರಿ ಸೇತುವೆ ಬಳಿ ರಾತ್ರಿ 12:30ರ ಸುಮಾರಿಗೆ ನಡೆದಿದೆ. ಮೃತರನ್ನು ಹಾವೇರಿಯ ಅಶ್ವಿನಿ ನಗರದ ನಿವಾಸಿಗಳು ಎಂದು ಗುರುತಿಸಲಾಗಿದೆ.

5. ಉತ್ತರ ಕನ್ನಡ ಜಿಲ್ಲೆಯಲ್ಲಿ 108 ಮಂಗನ ಕಾಯಿಲೆ ಪತ್ತೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 108 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿದ್ದು, ಇದು ಆತಂಕ ಹೆಚ್ಚಾಗುವಂತೆ ಮಾಡಿದೆ. ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2019ರಲ್ಲಿ 50 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಪ್ರಸಕ್ತ ಸಾಲಿನಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿರುವುದು ತಿಳಿದುಬಂದಿದೆ. ಸಿದ್ದಾಪುರ ಒಂದರಲ್ಲೇ 100 ಪ್ರಕರಣಗಳು ದಾಖಲಾಗಿವೆ. ಉಳಿದ ಎಂಟು ಪ್ರಕರಣಗಳು ಜೊಯಿಡಾ, ಶಿರಸಿ ಮತ್ತು ಅಂಕೋಲಾದಲ್ಲಿ ಪತ್ತೆಯಾಗಿವೆ. ಈ ವರ್ಷ ಐದು ಮತ್ತು ಒಂಬತ್ತು ವರ್ಷದ ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಆತಂಕದ ವಿಚಾರವೆಂದರೆ ಈ ಎಲ್ಲಾ ಸಾವುಗಳು ಸಿದ್ದಾಪುರ ತಾಲೂಕಿನಲ್ಲಿ ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com