
ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ಎಲ್ಲಿ ಅಡಗಿದ್ದಾರೆ ಎಂಬ ಮಾಹಿತಿ SIT ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಿದೆ ಎಂದು ಸಹಕಾರ ಸಚಿವರೂ ಆಗಿರುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕೆಎನ್ ರಾಜಣ್ಣ ಅವರು, ಪ್ರಜ್ವಲ್ ರೇವಣ್ಣ ಸಂಸದರಾಗಿರುವ ಕಾರಣ ಅವರು ಎಲ್ಲಿದ್ದಾರೆ ಎಂದು ಎಲ್ಲರಿಗೆ ಗೊತ್ತಿದೆ. ಆತ ಎಲ್ಲಿದ್ದಾನೆ ಅಂತ ಸರ್ಕಾರಕ್ಕೂ ಗೊತ್ತು, ಕೇಂದ್ರಕ್ಕೂ ಗೊತ್ತು. ಎಸ್‌ಐಟಿ ಪೊಲೀಸರಿಗೂ ಗೊತ್ತು. ಪಾಸ್ ಪೋರ್ಟ್ ರದ್ಧು ಏಕಾಏಕಿ ಆಗಲ್ಲ, ಅವಕಾಶ ಮಾಡಿಕೊಡಬೇಕು. ಕಾನೂನಿನ ಲೋಪವಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ರಾಜಣ್ಣ ಹೇಳಿದ್ದಾರೆ.
ಪ್ರಜ್ವಲ್ ಬಂಧನ ವಿಳಂಬವಾಗುತ್ತಿದೆ ಎಂಬುದನ್ನು ಅಲ್ಲಗಳೆದ ಅವರು, ರಾಜ್ಯ ಸರ್ಕಾರ ಕಾನೂನು ಕ್ರಮಗಳನ್ನು ಅನುಸರಿಸುತ್ತಿರುವುದೇ ಇದಕ್ಕೆ ಕಾರಣ. ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಸಿಎಂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ನಡುವೆಯೇ ಸಿದ್ದರಾಮಯ್ಯ ಸಂಪುಟದ ಸಹೋದ್ಯೋಗಿ ಹೇಳಿಕೆ ನೀಡಿದ್ದಾರೆ.
ಕುತೂಹಲದ ಸಂಗತಿಯೆಂದರೆ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮೇ.23ರಂದು ತಮ್ಮ ಮೊಮ್ಮಗ ಪ್ರಜ್ವಲ್ ಎಲ್ಲಿದ್ದರೂ ದೇಶಕ್ಕೆ ಮರಳುವಂತೆ ಎಚ್ಚರಿಕೆ ನೀಡಿದ್ದರು. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಅಣ್ಣನ ಮಗ ಪ್ರಜ್ವಲ್ ಎಲ್ಲಿದ್ದಾರೆ ಎಂದು ನನಗಾಗಲಿ ಅಥವಾ ಅವರ ಕುಟುಂಬ ಸದಸ್ಯರಿಗೆ ಗೊತ್ತಿಲ್ಲ. ಆದರೆ ಕೂಡಲೇ ಮನೆಗೆ ಮರಳುವಂತೆ ಪ್ರಜ್ವಲ್‌ಗೆ ಮನವಿಯನ್ನೂ ಮಾಡಿದ್ದರು. ಆದರೆ ಪ್ರಜ್ವಲ್ ಇರುವ ಬಗ್ಗೆ ಸಂಬಂಧಪಟ್ಟವರಿಗೆಲ್ಲಾ ಗೊತ್ತಿದೆ ಎಂದು ರಾಜಣ್ಣ ಹೇಳಿರುವುದು ಅಚ್ಚರಿ ಮೂಡಿಸಿದೆ.
ಪ್ರಜ್ವಲ್ ರಿಂದ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿರುವ ಸಂತ್ರಸ್ತರ ಕುಟುಂಬದ ಘನತೆಗೆ ಧಕ್ಕೆಯಾಗದಂತೆ ಗೌಪ್ಯವಾಗಿ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಎಸ್‌ಐಟಿ ಪಟ್ಟುಬಿಡದೆ ಸಂಗ್ರಹಿಸುತ್ತಿದೆ ಎಂದರು. ಏತನ್ಮಧ್ಯೆ, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ಅವರ ಎದುರಾಳಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲ್ಲಲ್ಲಿದ್ದಾರೆ ಎಂದು ರಾಜಣ್ಣ ಹೇಳಿದ್ದಾರೆ.
ಪೆನ್ ಡ್ರೈವ್ ನ ತಂದೆ ಹೆಚ್ ಡಿಕೆ: ರಾಜಣ್ಣ
ಏತನ್ಮಧ್ಯೆ, ಪ್ರಜ್ವಲ್ ರೇವಣ್ಣ ಅವರ ಆಕ್ಷೇಪಾರ್ಹ ಅಶ್ಲೀಲ ವೀಡಿಯೊಗಳನ್ನು ಒಳಗೊಂಡಿರುವ ಪೆನ್ ಡ್ರೈವ್‌ಗೆ ಹೆಚ್ ಡಿ ಕುಮಾರಸ್ವಾಮಿ ತಂದೆಯಾಗಿರಬಹುದು ಎಂದು ರಾಜಣ್ಣ ಆರೋಪಿಸಿದ್ದಾರೆ. 'ಕುಮಾರಸ್ವಾಮಿಯವರು ತಮ್ಮ ಬಳಿ ಪೆನ್ ಡ್ರೈವ್ ಇದೆ ಎಂದು ಪದೇ ಪದೇ ಹೇಳುತ್ತಿದ್ದರು. ಅದು ಅದೇ ಪೆನ್ ಡ್ರೈವ್ ಇರಬಹುದೆಂದು ಯಾರಿಗೆ ಗೊತ್ತು ಎಂದು ಅವರು ಲೇವಡಿ ಮಾಡಿದರು.
Advertisement