
ಮಂಗಳೂರು: ಧಾರಕಾರ ಮಳೆಯ ಪರಿಣಾಮ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಆಟೋ ಚಾಲಕನೋರ್ವ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ.
ದೀಪಕ್ ಆಚಾರ್ಯ (42) ಮೃತ ವ್ಯಕ್ತಿಯಾಗಿದ್ದು, ಕುಲೂರ್ ನ ನಿವಾಸಿಯಾಗಿದ್ದಾರೆ. ಪೊಲೀಸರ ಮಾಹಿತಿಯ ಪ್ರಕಾರ, ಕೊಟ್ಟಾರದ ಯಮುನಾ ಪ್ಯಾರಡೈಸ್ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಚರಂಡಿಯಲ್ಲಿ ಬಿದ್ದು ಮುಳುಗಿ ಸಾವನ್ನಪ್ಪಿದ್ದಾರೆ.
ಏತನ್ಮಧ್ಯೆ, ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಅಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ತ ವ್ಯಕ್ತಿ ಸಹೋದರಿ ಹೇಮಲತಾ ನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ದೀಪಕ್ ಬ್ಯಾಪ್ಟಿಸ್ಟ್ ಜಾರ್ಜ್ ಪಿರೇರಾ ಎಂಬುವರ ಒಡೆತನದ ಆಟೋ ರಿಕ್ಷಾವನ್ನು ನಡೆಸುತ್ತಿದ್ದು, ಶುಕ್ರವಾರ ಮಧ್ಯಾಹ್ನ ಊಟ ಮುಗಿಸಿ 1 ಗಂಟೆ ಸುಮಾರಿಗೆ ಮನೆಯಿಂದ ಹೊರಟು ಮಧ್ಯರಾತ್ರಿಯಾದರೂ ವಾಪಸ್ ಬಂದಿಲ್ಲ ಎಂದು ತಿಳಿಸಿದ್ದಾರೆ. ಕೊನೆಗೆ ಆತ ಸಾವನ್ನಪ್ಪಿರುವುದರ ಬಗ್ಗೆ ಆಕೆಗೆ ಕರೆ ಬಂದಿತ್ತು.
ತನ್ನ ಸಹೋದರನ ಸಾವಿಗೆ ಎಂಸಿಸಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹೇಮಲತಾ ಆರೋಪಿಸಿದ್ದು, ಸಮಯಕ್ಕೆ ಸರಿಯಾಗಿ ಚರಂಡಿಯನ್ನು ಸ್ವಚ್ಛಗೊಳಿಸದ ಕಾರಣ ಕಸ ತುಂಬಿ ಮಳೆ ನೀರು ರಸ್ತೆಗೆ ಹರಿದು ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಚರಂಡಿ ನೀರು ರಸ್ತೆಯಲ್ಲಿ ತುಂಬಿ ಹರಿಯುತ್ತಿದ್ದು, ತನ್ನ ಸಹೋದರನ ಗಮನಕ್ಕೆ ಬಂದಿಲ್ಲ, ಇಂತಹ ಅನಾಹುತಗಳನ್ನು ತಪ್ಪಿಸಲು ಸ್ಥಳೀಯ ಆಡಳಿತ ತಡೆಗೋಡೆ ನಿರ್ಮಿಸಿಲ್ಲ ಎಂದು ಆಕೆ ಹೇಳಿದ್ದಾರೆ.
Advertisement