
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚುವಿಕೆಯ ಸಮಗ್ರ ಕಾರ್ಯಾಚರಣೆ, ಮೇಲ್ವಿಚಾರಣೆ ಮತ್ತು ಅನುಷ್ಠಾನಕ್ಕಾಗಿ ಹೊಸ ಕಾರ್ಯಪಡೆ ಸಮಿತಿಯನ್ನು ರಚಿಸಲಾಗಿದೆ. ಕೆಲವು ದಿನಗಳ ಹಿಂದೆ ಸಿಟಿ ರೌಂಡ್ಸ್ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂಗಾರು ಪೂರ್ವದಲ್ಲಿ ಪಾಲಿಕೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದ್ದರು. ಅವರ ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಿಎಂ ಆದೇಶದಂತೆ, ಆದಷ್ಟು ಬೇಗ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ವಲಯ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಇದು ಪ್ರತಿ ವಲಯದ ಸಂಚಾರಿ ಎಸಿಪಿ ಅವರನ್ನೊಳಗೊಂಡಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 12.878 ಕಿ.ಮೀ ಉದ್ದದ ರಸ್ತೆಗಳಿವೆ. ಈ ರಸ್ತೆಗಳ ಪೈಕಿ 1,344.84 ಕಿ.ಮೀ ಉದ್ದದ ರಸ್ತೆಗಳನ್ನು ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳೆಂದು ಪರಿಗಣಿಸಲಾಗಿದೆ. ಉಳಿದ 11533.16 ಕಿ.ಮೀ ರಸ್ತೆಗಳನ್ನು ವಲಯ ಮಟ್ಟದಲ್ಲಿ ನಿರ್ವಿುಸಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯ ಆಯುಕ್ತರು, ಪಾಲಿಕೆ ವಾರದೊಳಗೆ ಈಗಾಗಲೇ 1,500 ಗುಂಡಿಗಳನ್ನು ಮುಚ್ಚಿದ್ದು, ಶೀಘ್ರದಲ್ಲೇ ನಗರದಾದ್ಯಂತ 4,500 ಗುಂಡಿಗಳನ್ನು ಮುಚ್ಚಲಿದೆ ಎಂದು ತಿಳಿಸಿದರು.
ಆರ್‌ಆರ್ ನಗರ ಮತ್ತು ದಾಸರಹಳ್ಳಿ ವಲಯವನ್ನು ಹೊರತುಪಡಿಸಿ, ಮೇ 31 ರೊಳಗೆ ಎಲ್ಲಾ ವಲಯಗಳಲ್ಲಿ ಗುಂಡಿಗಳನ್ನು ಮುಚ್ಚಲಾಗುವುದು, ಆರ್‌ಆರ್ ನಗರ ಮತ್ತು ದಾಸರಹಳ್ಳಿ ಎರಡೂ ಸೇರಿ 1,200 ಕ್ಕೂ ಹೆಚ್ಚು ಗುಂಡಿಗಳನ್ನು ಹೊಂದಿರುವುದರಿಂದ ಗಡುವನ್ನು ಜೂನ್ 4 ರವರೆಗೆ ವಿಸ್ತರಿಸಲಾಗಿದೆ. ಜೂನ್ 6 ರಂದು ಬಿಡುಗಡೆಯಾಗಲಿರುವ ಹೊಸ ಮೊಬೈಲ್ ಆ್ಯಪ್ ಮೂಲಕವೂ ಗುಂಡಿಗಳನ್ನು ಗುರುತಿಸಲು, ಮುಂಗಾರು ಅವಧಿಯಲ್ಲಿ ಸಮಸ್ಯೆ ಬಗೆಹರಿಸಲು ಸಂಚಾರಿ ಪೊಲೀಸರು ಹಾಗೂ ಬಿಬಿಎಂಪಿ ಮಾರ್ಷಲ್ ಗಳಿಂದ ಮಾಹಿತಿ ಮತ್ತು ಪ್ರತಿಕ್ರಿಯೆ ಪಡೆಯಲಾಗುವುದು ಎಂದರು.
ಅಲ್ಲದೆ, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು 1,400 ಕಿ.ಮೀ ಉದ್ದದ ರಸ್ತೆಯನ್ನು ನಿರ್ವಿುಸಲಾಗುವುದು. ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ‘ಕ್ಯಾಮೆರಾ ಅಳವಡಿಸಿರುವ ವಾಹನಗಳು ಈ ರಸ್ತೆಗಳಲ್ಲಿ ಸಂಚರಿಸಲಿದ್ದು, ಅಧಿಕಾರಿಗಳು ಮತ್ತು ಬಿಬಿಎಂಪಿ ಮಾರ್ಷಲ್‌ಗಳ ವರದಿ ಮತ್ತು ಪ್ರತಿಕ್ರಿಯೆ ಆಧರಿಸಿ ಪಾಲಿಕೆ ಸಮಸ್ಯೆ ಪರಿಶೀಲಿಸಲಿದೆ ಎಂದು ಗಿರಿನಾಥ್ ತಿಳಿಸಿದರು.
Advertisement