
ಬೆಂಗಳೂರು: ಮುಂಗಾರು ಪ್ರವೇಶಕ್ಕೆ ಮುನ್ನ ಕರ್ನಾಟಕದಲ್ಲಿ ಈ ವರ್ಷ ಸಾಕಷ್ಟು ವಿಳಂಬದ ನಂತರ ಖಾರಿಫ್ ಪೂರ್ವ ಬಿತ್ತನೆ ಆರಂಭವಾಗಿದೆ. ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆ ಸುರಿದು ಸಂಕಷ್ಟದಲ್ಲಿರುವ ರೈತರಿಗೆ ಸಮಾಧಾನ ತಂದಿದೆ. ಆದರೆ ಹಲವೆಡೆ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿದ್ದು, ರೈತರ ಬೀಜ ಬಿತ್ತನೆ ಕಾರ್ಯ ನಿರೀಕ್ಷಿತ ಮಟ್ಟ ತಲುಪಿಲ್ಲ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ(KSNDMC) ಅಂಕಿಅಂಶಗಳ ಪ್ರಕಾರ, ಮೇ 1 ರಿಂದ ಇಲ್ಲಿಯವರೆಗೆ, ರಾಜ್ಯದಲ್ಲಿ ಸರಾಸರಿ ಪ್ರತಿವರ್ಷ 60 ಮಿಲಿ ಮೀಟರ್ ಮಳೆಯಾಗುತ್ತಿತ್ತು. ಈ ವರ್ಷ ಇದುವರೆಗೆ ಸರಾಸರಿ 127 ಮಿಮೀ ಮಳೆಯಾಗಿದೆ. ದಕ್ಷಿಣ ಒಳನಾಡು ಕರ್ನಾಟಕದಲ್ಲಿ 74 ಮಿಲಿ ಮೀಟರ್ ಗೆ ವಿರುದ್ಧವಾಗಿ 162ಮಿಮೀ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಸರಾಸರಿ 40ಮಿಮೀ ವಿರುದ್ಧವಾಗಿ 76ಮಿಮೀ ಮಳೆಯಾಗಿದೆ. ಮಲೆನಾಡಿನಲ್ಲಿ 81ಮಿಮೀ ವಿರುದ್ಧವಾಗಿ 203ಮಿಮೀ ಮಳೆಯಾಗಿದೆ. ಕರಾವಳಿ ಕರ್ನಾಟಕದಲ್ಲಿ ಸರಾಸರಿ 86ಮಿಮೀ ವಿರುದ್ಧವಾಗಿ 159ಮಿಮೀ ಮಳೆ ದಾಖಲಾಗಿದೆ.
ಮಳೆಯಿಂದಾಗಿ ರೈತರು ತಮ್ಮ ಕೆರೆಗಳನ್ನು ತುಂಬಿಸಿಕೊಳ್ಳಲು ಮತ್ತು ಅಂತರ್ಜಲವನ್ನು ಮರುಪೂರಣಗೊಳಿಸಲು ಸಹಾಯ ಮಾಡುತ್ತಿದೆ, ಆದರೆ ಕೆಲವು ಭಾಗಗಳಲ್ಲಿ ಭೂಮಿಯು ಒದ್ದೆಯಾಗಿದ್ದರೂ, ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಕೃಷಿ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಖಾರಿಫ್ ಪೂರ್ವದಲ್ಲಿ 2.95 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಮೇ 24ರವರೆಗೆ 0.943 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಒಂದು ಲಕ್ಷ ಹೆಕ್ಟೇರ್‌ಗಿಂತ ಕಡಿಮೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಎರಡು ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿತ್ತು.
ಕೆಎಸ್‌ಎನ್‌ಡಿಎಂಸಿ ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿ, ಸಾಮಾನ್ಯವಾಗಿ ಏಪ್ರಿಲ್ ಅಂತ್ಯದ ವೇಳೆಗೆ ಬಿತ್ತನೆ ಪ್ರಾರಂಭವಾಗುತ್ತಿತ್ತು, ಆದರೆ ಈ ವರ್ಷ ಮಳೆ ಕೊರತೆಯಿಂದಾಗಿ ರೈತರಿಗೆ ಬೇಸಿಗೆಯಲ್ಲಿ ಬಿತ್ತನೆ ಕಾರ್ಯ ಮಾಡಲು ಸಾಧ್ಯವಾಗಲಿಲ್ಲ. ಕೆಲವೆಡೆ ಭೂಮಿ ಒಣಗಿದ್ದರಿಂದ ಮುಂಗಾರು ಪೂರ್ವ ತಯಾರಿಯನ್ನೂ ಕೈಗೆತ್ತಿಕೊಳ್ಳಲು ಸಾಧ್ಯವಾಗದೆ, ಬಿತ್ತನೆ ಆರಂಭಿಸಲು ಸಾಧ್ಯವಾಗಿಲ್ಲ ಎಂದರು.
ಆದರೆ, ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿರುವುದರಿಂದ ರೈತರು ಈ ಬಾರಿ ಎರಡನೇ ಬೆಳೆ ಗಳಿಸುವ ನಿರೀಕ್ಷೆಯಲ್ಲಿರಬಹುದು ಎಂದು ಶ್ರೀನಿವಾಸ್ ರೆಡ್ಡಿ ಹೇಳಿದರು. ಬಿತ್ತನೆ ಕಾರ್ಯ 15 ದಿನಗಳಿಂದ ಮೂರು ವಾರಗಳ ಕಾಲ ವಿಳಂಬವಾಗಿದ್ದು, ಎರಡನೇ ಬೆಳೆಯನ್ನು ಪಡೆಯಲು ಬಯಸುವ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
Advertisement