ಬರಗಾಲದ ನಡುವೆ ಗಾಳಿ-ಮಳೆ: ರಾಜ್ಯದ ವಿವಿಧ ಜಿಲ್ಲೆಗಳ ರೈತರ ಬದುಕು-ಬವಣೆಯ ಕುರಿತ ವರದಿ....

ಚಾಮರಾಜನಗರ, ಮಂಡ್ಯ, ಮೈಸೂರು, ಹಾವೇರಿ ಮತ್ತು ಕಲಬುರಗಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಅವಲಂಬಿಸಿರುವ ರೈತರು ತಮ್ಮ ಬಾಳೆ, ಈರುಳ್ಳಿ ಮತ್ತು ಟೊಮೆಟೊ ಬೆಳೆಗಳನ್ನು ಕಳೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಳೆದ ವರ್ಷದ ಭೀಕರ ಬರಗಾಲವು ಕರ್ನಾಟಕದ ರೈತರನ್ನು ತೀವ್ರ ಸಂಕಷ್ಟಕ್ಕೆ ಒಡ್ಡಿದೆ. ರಾಜ್ಯ ಸರ್ಕಾರವು ಈ ವರ್ಷ ಪೂರ್ವ ಮುಂಗಾರು ಹೊತ್ತಿನಲ್ಲಿ ಪರಿಹಾರವನ್ನು ವಿತರಿಸಲು ಪ್ರಾರಂಭಿಸಿರುವ ನಡುವೆ, ಭಾರೀ ಮಳೆ ಮತ್ತು ಗಾಳಿಯು ಅವರ ಸಂಕಟಗಳನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಏಪ್ರಿಲ್ ಕೊನೆಯ ವಾರದಿಂದ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರೀ ಪೂರ್ವ ಮುಂಗಾರು ಮಳೆಯಾಗುತ್ತಿದ್ದು, ಹಲವೆಡೆ ಬೆಳೆ ಹಾನಿಯಾಗಿದೆ.

ಚಾಮರಾಜನಗರ, ಮಂಡ್ಯ, ಮೈಸೂರು, ಹಾವೇರಿ ಮತ್ತು ಕಲಬುರಗಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಅವಲಂಬಿಸಿರುವ ರೈತರು ತಮ್ಮ ಬಾಳೆ, ಈರುಳ್ಳಿ ಮತ್ತು ಟೊಮೆಟೊ ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಈ ಬಗ್ಗೆ ಮಾತನಾಡಿ, ಮಳೆಯಿಂದ ಹಾನಿಯಾಗಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ನಿಯಮಾನುಸಾರ ಪರಿಹಾರ ನೀಡಲಾಗುತ್ತಿದೆ ಎಂದರು.

ಕಳೆದ ವರ್ಷ ನೈಋತ್ಯ ಮತ್ತು ಈಶಾನ್ಯ ಮಾನ್ಸೂನ್ ವಿಫಲವಾದ ನಂತರ, ರಾಜ್ಯ ಸರ್ಕಾರವು 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತು. ಬರ ಪರಿಹಾರಕ್ಕಾಗಿ ಕೇಂದ್ರದಿಂದ 18,177 ಕೋಟಿ ರೂಪಾಯಿಗಳ ಬೇಡಿಕೆಯಿಟ್ಟಿತು, 46.11 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾಗೂ 2.06 ಲಕ್ಷ ಹೆಕ್ಟೇರ್ ತೋಟಗಾರಿಕಾ ಭೂಮಿಯಲ್ಲಿ ಬೆಳೆ ನಷ್ಟದ ಅಂದಾಜು ಪಟ್ಟಿ ತಯಾರಿಸಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮುಂದಿಟ್ಟಿತ್ತು.

ರಾಜ್ಯ ಸರ್ಕಾರ ಈಗಾಗಲೇ 32.12 ಲಕ್ಷ ರೈತರಿಗೆ ಬರ ಪರಿಹಾರ ನೀಡಿದೆ. ಅಧಿಕಾರಿಗಳು ಎರಡು ಲಕ್ಷಕ್ಕೂ ಅಧಿಕ ರೈತರ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ತಲಾ 4 ಸಾವಿರ ರೂಪಾಯಿಗಳನ್ನು ನೀಡಿದೆ. ಪರಿಹಾರ ಪಟ್ಟಿಯಡಿ ನೋಂದಣಿಯಾಗದ 1.63 ಲಕ್ಷ ರೈತರಿಗೆ ಪರಿಹಾರ ನೀಡಲು ಕಂದಾಯ ಇಲಾಖೆ ನಿರ್ಧರಿಸಿದೆ. 16 ಲಕ್ಷ ರೈತರು ಸಣ್ಣ ಜಮೀನು ಹೊಂದಿರುವವರಿದ್ದು, ಅವರಿಗೆ 3,000 ರೂಪಾಯಿ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ವಿಜಯಪುರ ಜಿಲ್ಲೆಯಲ್ಲಿ ನಿಂಬೆ ಗಿಡಗಳನ್ನು ಉಳಿಸಲು ಪ್ರಯತ್ನ: ಮೊಹಮ್ಮದ್ ರಫೀಕ್ ಪಟೇಲ್ ಎಂಬ ರೈತರು ತಮ್ಮ 25 ನಿಂಬೆ ಗಿಡಗಳು ಒಣಗದಂತೆ ತಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಬಹುಪಾಲು ಸಸ್ಯಗಳು ಸಂಪೂರ್ಣವಾಗಿ ಕಿತ್ತುಹಾಕಲ್ಪಟ್ಟಿತ್ತು ಮತ್ತೆಂದೂ ನಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ನನ್ನ ತೋಟದ ಸಸ್ಯಗಳು ಒಣಗುವುದನ್ನು ನೋಡಿಕೊಂಡು ಸುಮ್ಮನೆ ಇರಲು ಸಾಧ್ಯವಾಗುತ್ತಿಲ್ಲ. ಪ್ರಕೃತಿ ದಯಪಾಲಿಸುತ್ತಾಳೆ ಎಂಬ ನಂಬಿಕೆಯಿಂದ ಬಿದಿರುಗಳ ಬೆಂಬಲದೊಂದಿಗೆ ಸಸ್ಯಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಾರೆ.

ಪಟೇಲರ ತೋಟವಿರುವ ಇಂಡಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಇತ್ತೀಚೆಗೆ ಬೀಸಿದ ಗಾಳಿ ಮಳೆಗೆ ಸುಮಾರು 15 ವರ್ಷ ಪ್ರಾಯದ 25 ನಿಂಬೆ ಗಿಡಗಳನ್ನು ಕಳೆದುಕೊಂಡಿರುವ ಅವರ ಪರಿಸ್ಥಿತಿಯಿದು. ಸುಮಾರು 60 ದಿನಗಳಿಂದ ಬರಗಾಲದಿಂದ ಪಾರಾಗಲು ಪ್ರತಿ ದಿನ ಸುಮಾರು 1,000 ರೂಪಾಯಿ ಖರ್ಚು ಮಾಡಿ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಹವಣಿಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ
ನಿಕೋಬಾರ್ ದ್ವೀಪಗಳು, ದಕ್ಷಿಣ ಅಂಡಮಾನ್ ಸಮುದ್ರ ಮೇಲೆ ನೈಋತ್ಯ ಮುಂಗಾರು ಆರಂಭ: IMD ಮುನ್ಸೂಚನೆ

ನಿಂಬೆ ಗಿಡಗಳ ಸಮಸ್ಯೆ ಏನೆಂದರೆ ಅವು ಒಣಗಿ ಹೋದರೆ ಮತ್ತೆ ಹಸಿರಾಗುವುದಿಲ್ಲ. ಅದನ್ನು ಕಡಿಯುವುದನ್ನು ಬಿಟ್ಟು ರೈತನಿಗೆ ಬೇರೆ ದಾರಿಯಿಲ್ಲ. ಪ್ರತಿ ಸಸ್ಯವು ಫಲ ನೀಡುವ ಅವಧಿಯನ್ನು ತಲುಪಲು ಕನಿಷ್ಠ ಆರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ನನ್ನಂತಹ ರೈತರು ಗಿಡಗಳನ್ನು ಉಳಿಸಲು ಹರಸಾಹಸ ಪಡುತ್ತಿದ್ದಾರೆ, ಟ್ಯಾಂಕರ್ ಮೂಲಕವೂ ನೀರು ಪೂರೈಸುತ್ತಿದ್ದಾರೆ ಎಂದು ಕಷ್ಟವನ್ನು ತೋಡಿಕೊಂಡರು.

ಪಟೇಲ್ ಅವರು ತಮ್ಮ ನೂರು ಗಿಡಗಳಿಂದ ಪ್ರತಿ ವರ್ಷ ಸುಮಾರು 6 ಲಕ್ಷ ರೂಪಾಯಿ ಗಳಿಸುತ್ತಿದ್ದರು, ಆದರೆ ಈಗ ಸಂಪೂರ್ಣವಾಗಿ ಬೆಳೆದ ಸುಮಾರು 25 ಗಿಡಗಳನ್ನು ಕಳೆದುಕೊಂಡು ಅವರ ಆದಾಯವೂ ಕುಸಿದಿದೆ.

ಕೋಲಾರದಲ್ಲಿ ಗಾಳಿಮಳೆಗೆ ಬಾಳೆಗಿಡಗಳು ನೆಲಸಮ: ಕೋಲಾರ ಜಿಲ್ಲೆ ಹುತ್ತೂರು ಹೋಬಳಿಯ ಜಂಗಮ ಬಸವಪುರದ ರೈತ ಬಸವರಾಜ್ ಅವರು ಕಳೆದ ವರ್ಷದಂತೆ ಯಾಲಕ್ಕಿ ಬಾಳೆ ಬೆಳೆಗೆ ಬಂಪರ್ ಬೆಲೆ ಬರಬಹುದು ಎಂದು ಕಾಯುತ್ತಿದ್ದರು. ಆದರೆ ಮೊನ್ನೆ ಬಿದ್ದ ಭಾರಿ ಗಾಳಿಯಿಂದಾಗಿ ಬೆಳೆ ನಾಶವಾಗಿದ್ದು, 6 ಲಕ್ಷ ರೂಪಾಯಿಗಳಷ್ಟು ನಷ್ಟವಾಗಿದೆ. ಕಳೆದ ವರ್ಷ ಬಂಪರ್ ಬೆಳೆ ಪಡೆದು ಸುಮಾರು 6.5 ಲಕ್ಷ ರೂಪಾಯಿ ಗಳಿಸಿದ್ದರು.

ಈ ವರ್ಷ ಏಳು ಎಕರೆ ಜಮೀನಿನಲ್ಲಿದ್ದ ಇವರ ಬಾಳೆ ತೋಟ ಗಾಳಿಗೆ ನೆಲಸಮವಾಗಿದೆ. ಬಸವರಾಜ್ ಅವರು ಮೂರು ಎಕರೆ ಹೊಂದಿದ್ದು, ಇನ್ನೂ ನಾಲ್ಕು ಎಕರೆ ಗುತ್ತಿಗೆ ಪಡೆದಿದ್ದಾರೆ. ನಾನು ಎಕರೆಗೆ 50,000 ರಿಂದ 60,000 ರೂಪಾಯಿಗಳಷ್ಟು ಹೂಡಿಕೆ ಮಾಡಿದ್ದೇನೆ. ಕಳೆದ ವಾರ ಬೀಸಿದ ಭಾರೀ ಗಾಳಿಗೆ ಬೆಳೆ ಹಾನಿಯಾಗಿದೆ ಎಂದು ಹೇಳಿದರು. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದ ಮಾವು ಬೆಳೆಗಾರರು ಸಂತಸಗೊಂಡಿದ್ದಾರೆ. ಉತ್ತಮ ಇಳುವರಿ ಸಿಗಲಿದೆ ಎನ್ನುತ್ತಾರೆ ಶ್ರೀನಿವಾಸಪುರದ ಮಾವು ಬೆಳೆಗಾರ ನಾರಾಯಣಸ್ವಾಮಿ.

ಬೆಳಗಾವಿಯಲ್ಲಿ ಬರಗಾಲ, ನಂತರ ಮಳೆಗೆ ಭಾರೀ ನಷ್ಟ: ಬರ ಮತ್ತು ಅತಿವೃಷ್ಟಿ ರೈತರಿಗೆ ಅದರಲ್ಲೂ ಬೆಳಗಾವಿಯ ಬಳ್ಳಾರಿ ನಾಲಾ ದಡದಲ್ಲಿ ಹೊಲಗಳನ್ನು ಹೊಂದಿರುವ ರೈತರಿಗೆ ಹಿಡಿಶಾಪದಂತಾಗಿದೆ. ಅನಾವೃಷ್ಟಿ ಹಾಗೂ ಅತಿವೃಷ್ಟಿಯಿಂದ ಅವರ ಬೆಳೆಗಳು ಹಾಳಾಗಿವೆ.

ಅನಾವೃಷ್ಟಿ, ಅತಿವೃಷ್ಟಿಯಿಂದ ನಷ್ಟ ಎದುರಿಸುತ್ತಿರುವ ರೈತರಲ್ಲೊಬ್ಬರಾದ ಗೋಪಾಲ್ ಸೋಮನಾಚೆ, ಬಳ್ಳಾರಿ ನಾಲಾ ದಡದಲ್ಲಿ ಒಂದು ಎಕರೆ 27 ಗುಂಟೆ ಫಲವತ್ತಾದ ಜಮೀನು ಹೊಂದಿದ್ದಾರೆ. ಇದರಲ್ಲಿ ಹಲಗಾ-ಮಚ್ಚೆ ಬೈಪಾಸ್ ರಸ್ತೆಯನ್ನು ಹಾಕಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 10 ಗುಂಟೆಗಳನ್ನು ಸ್ವಾಧೀನಪಡಿಸಿಕೊಂಡಿದೆ. ಉಳಿದ ಜಮೀನಿನಲ್ಲಿ ಭತ್ತದ ಕೃಷಿ ಮಾಡಿದ್ದರು.

ಸಾಂದರ್ಭಿಕ ಚಿತ್ರ
ಯಲಹಂಕದಲ್ಲಿ ನರಕ ಸೃಷ್ಟಿಸಿದ ಮಳೆ: ಉಕ್ಕಿ ಹರಿದ ಚರಂಡಿ; ನಾರ್ತ್‌ವುಡ್ ವಿಲ್ಲಾ ನಿವಾಸಿಗಳು ಕಂಗಾಲು!

ಅನಾವೃಷ್ಟಿಯಿಂದ ಭತ್ತದ ಬೆಳೆ ಹಾಳಾಗಿ ಅಪಾರ ನಷ್ಟ ಅನುಭವಿಸಿದ್ದೇವೆ. ಕೊತ್ತಂಬರಿ ಮತ್ತು ಮೆಂತ್ಯದಂತಹ ಹಸಿರು ಬೆಳೆಗಳನ್ನು ಬೆಳೆಸಲು ಪ್ರಾರಂಭಿಸಿದೆವು, ಆದರೆ ಇತ್ತೀಚಿನ ಭಾರೀ ಮಳೆಯಿಂದ ಅವುಗಳಿಗೆ ಹಾನಿಯಾಗಿದೆ. ನಮ್ಮ ಕುಟುಂಬ ಕೃಷಿಯ ಮೇಲೆ ಅವಲಂಬಿತವಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ತುಂಬಾ ಕಷ್ಟವಾಗಲಿದೆ ಎನ್ನುತ್ತಾರೆ.

ಮತ್ತೋರ್ವ ರೈತ ಹಾಗೂ ಸಮಾಜ ಸೇವಕ ರಾಜು ಮಾರ್ವೆ, 2013ರಿಂದ ಬಳ್ಳಾರಿ ನಾಲಾ ಹೂಳು ತೆಗೆಯಬೇಕು ಹಾಗೂ ಒತ್ತುವರಿ ತೆರವು ಮಾಡುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಅಲ್ಪ, ಭಾರಿ ಮಳೆಯಾದರೂ ತನ್ನ ಹೊಲಗಳಿಗೆ ನೀರು ನುಗ್ಗಿ ಬೆಳೆಗಳಿಗೆ ಹಾನಿಯಾಗುತ್ತದೆ ಎಂದು ಮಾರ್ವೆ ಹೇಳುತ್ತಾರೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಳ್ಳಾರಿ ನಾಲಾ ಸ್ವಚ್ಛತೆ ಮತ್ತು ಅಭಿವೃದ್ಧಿಗೆ 800 ಕೋಟಿ ನೀಡುವುದಾಗಿ ಭರವಸೆ ನೀಡಿತ್ತು ಆದರೆ ಏನೂ ಆಗಿಲ್ಲ ಎಂದರು.

ಕಲಬುರಗಿಯಲ್ಲಿ ರೈತರಿಗೆ ಶಾಪವಾದ ಅಕಾಲಿಕ ಮಳೆ: ಕಲಬುರಗಿ ಜಿಲ್ಲೆಯ 131 ಮಂದಿ ರೈತರು ಏಪ್ರಿಲ್ 11 ರಿಂದ ಮೇ 10 ರವರೆಗೆ ಗಾಳಿ ಮತ್ತು ಅಕಾಲಿಕ ಮಳೆಯಿಂದ ಸುಮಾರು 92.55 ಹೆಕ್ಟೇರ್ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಕಾಳಗಿಯ ಹೇರೂರು(ಕೆ) ಗ್ರಾಮದ ರೇವಣಸಿದ್ದಪ್ಪ ಎಸ್ ಕುಂಬಾರ್ ಅವರಲ್ಲೊಬ್ಬರು. ಭಾರೀ ಗಾಳಿ ಮತ್ತು ಅಕಾಲಿಕ ಮಳೆಯಿಂದ ಹೆಚ್ಚು ಹಾನಿಗೊಳಗಾದ ತಾಲೂಕುಗಳಲ್ಲಿ ಒಂದಾಗಿದೆ. ಇವರು ಸುಮಾರು 12 ಎಕರೆ ಜಮೀನು ಹೊಂದಿದ್ದು, ಸುಮಾರು ಮೂರು ಎಕರೆಯಲ್ಲಿ ಪಪ್ಪಾಯಿ ಕೃಷಿ ಮಾಡಿದ್ದರು. ಈಗಷ್ಟೇ ಪಪ್ಪಾಯಿ ಇಳುವರಿ ಸಿಗುತ್ತಿದ್ದು, ಆರು ತಿಂಗಳಿಗೆ ಹಣ್ಣನ್ನು ಮಾರಾಟ ಮಾಡುವುದರಿಂದ ಒಳ್ಳೆಯ ಲಾಭ ಬರುತ್ತದೆ ಎಂದು ಖುಷಿಯಾಗಿದ್ದರು.

ಮೇ 9 ರಂದು ಸುರಿದ ಭಾರೀ ಗಾಳಿ ಮತ್ತು ಅಕಾಲಿಕ ಮಳೆ ನನ್ನ ಕನಸುಗಳನ್ನು ನುಚ್ಚುನೂರು ಮಾಡಿದವು ಎನ್ನುತ್ತಾರೆ. ಬೆಳೆದಿರುವ ಪಪ್ಪಾಯಿ ಬೆಳೆ ಶೇ.90 ರಷ್ಟು ಹಾನಿಯಾಗಿದ್ದು, ಸುಮಾರು 25 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಳಲುತೋಡಿಕೊಂಡರು. ಒಂಬತ್ತು ಎಕರೆಯಲ್ಲಿ ಕಬ್ಬು ಬೆಳೆದು ಸುಸ್ಥಿತಿಯಲ್ಲಿದ್ದರೂ ಇಳುವರಿಗಾಗಿ ಇನ್ನೂ ಆರು ತಿಂಗಳು ಕಾಯಬೇಕು.

ನಾನು ಪ್ರತಿ ಪರ್ಯಾಯ ವರ್ಷ ತೋಟಗಾರಿಕೆ ಬೆಳೆಗಳನ್ನು ಬದಲಾಯಿಸುತ್ತೇನೆ. ಈ ಹಿಂದೆ ಬಾಳೆ ಬೆಳೆದು ಭರ್ಜರಿ ಲಾಭ ಗಳಿಸಿದ್ದೆ. ಇದೇ ಮೊದಲ ಬಾರಿಗೆ ನಾನು ಭಾರೀ ನಷ್ಟ ಅನುಭವಿಸಿದ್ದು, ನಮ್ಮ ಕುಟುಂಬ ಖರ್ಚಿಗೆ ಕಡಿವಾಣ ಹಾಕಬೇಕಿದೆ ಎನ್ನುತ್ತಾರೆ. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು ಅವರ ಹೊಲಕ್ಕೆ ಭೇಟಿ ನೀಡಿ ಬೆಳೆ ನಷ್ಟದ ಸಮೀಕ್ಷೆ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕಾಫಿ ಮತ್ತು ಕಾಳು ಮೆಣಸು ನಷ್ಟ: ಮಲೆನಾಡು ಭಾಗದ ಕೃಷಿಕರು, ಮುಖ್ಯವಾಗಿ ಸಣ್ಣ ಬೆಳೆಗಾರರು, ಈ ವರ್ಷ ಪ್ರಕೃತಿಯ ವೈಪರೀತ್ಯದ ಭಾರವನ್ನು ಹೊತ್ತುಕೊಂಡಿದ್ದಾರೆ.

ಶಾಖದ ಅಲೆಗಳು ಮತ್ತು ತಾಪಮಾನದಿಂದ ಚಿಕ್ಕಮಗಳೂರಿನಲ್ಲಿ ಕಾಫಿ, ಮೆಣಸು ಬಳ್ಳಿಗಳು ಮತ್ತು ಅಡಿಕೆಯಂತಹ ತೋಟದ ಬೆಳೆಗಳಿಗೆ ತೀವ್ರ ಬರ ಮತ್ತು ಹಾನಿಯಾಗಿದೆ. ಬೆಳೆ ನಷ್ಟದ ಸಮಸ್ಯೆಯಿಂದ ರೈತರು ಪರದಾಡುತ್ತಿದ್ದಾರೆ.

ಆಲ್ದೂರು ಹೋಬಳಿ ವ್ಯಾಪ್ತಿಯ ದಿನ್ನೆಕೆರೆಯಲ್ಲಿ ಡಿ.ಎಂ.ಮಂಜುನಾಥ ಸ್ವಾಮಿ ಎಂಬ ಸಣ್ಣ ಬೆಳೆಗಾರ 15 ಎಕರೆ ಕಾಫಿ ತೋಟ ಹೊಂದಿದ್ದಾರೆ. ಇವರು ಅಂತರ ಬೆಳೆಯಾಗಿ ಕಾಳುಮೆಣಸನ್ನು ಬೆಳೆದು ವಯಸ್ಸಾದ ತಾಯಿ ಭದ್ರಮ್ಮ ಅವರೊಂದಿಗೆ ವಾಸಿಸುತ್ತಿದ್ದಾರೆ, ಅವರ ಇಬ್ಬರು ಸಹೋದರರು ಮತ್ತು ಸಹೋದರಿಯರು ವಿವಾಹವಾಗಿದ್ದಾರೆ.

ಸಾಂದರ್ಭಿಕ ಚಿತ್ರ
Bengaluru Water Crisis: ತಾರಕಕ್ಕೇರಿದ ನೀರಿನ ಸಮಸ್ಯೆ.. ಬೆನ್ಸನ್ ಟೌನ್ ಸತ್ತಮುತ್ತ ವಾರಕ್ಕೆ ಕೆಲವೇ ಗಂಟೆ ನೀರು, ಜನ ತತ್ತರ!

ಸಣ್ಣ ಬೆಳೆಗಾರ ಮಂಜುನಾಥ ಸ್ವಾಮಿ, ಹವಾಮಾನ ಬದಲಾವಣೆ ಕಾಫಿ, ಕಾಳುಮೆಣಸು ಬೆಳೆಗಳ ಮೇಲೆ ದುಷ್ಪರಿಣಾಮ ಬೀರಿದೆ. ಕಾಡು ಹಂದಿಗಳ ಹಾವಳಿಯಿಂದ ಭತ್ತದ ಕೃಷಿ ಸ್ಥಗಿತಗೊಂಡಿದೆ. ಈ ಹಿಂದೆ ಜನವರಿ ಮತ್ತು ಫೆಬ್ರುವರಿ ವರೆಗೆ ಸಾಕಷ್ಟು ಮಳೆ ಸುರಿದಿದ್ದು, ಕಾಳುಮೆಣಸು ಫಸಲು ಬರಲು ಸಹಕಾರಿಯಾಗಿತ್ತು.

ದುರದೃಷ್ಟವಶಾತ್, ಈ ಪ್ರದೇಶದಲ್ಲಿ ಬರಗಾಲದ ಹಿನ್ನೆಲೆಯಲ್ಲಿ, ಕಾಳುಮೆಣಸು ಬಳ್ಳಿಗಳು ಒಣಗಿಹೋಗಿವೆ. ಮೊಳಕೆಯೊಡೆಯುವ ಧಾನ್ಯಗಳು ಸಾಯಲಾರಂಭಿಸಿದವು. 40 ಕೆಜಿ ಒಣಮೆಣಸು ಸಿಗುತ್ತಿದ್ದ ನನಗೆ 25ಕೆಜಿಗೆ ಇಳಿದಿದೆ. ನನ್ನ ಜಮೀನಿನಲ್ಲಿ 320 ಕೆಜಿ ಪಲ್ಪ್ಡ್ ಅರೇಬಿಕಾ ಕಾಫಿ ಸಿಗುತ್ತದೆ ಆದರೆ ಅದು 150 ಕೆಜಿಗೆ ಕಡಿಮೆಯಾಗಿದೆ ಎಂದು ಅವರು ಹೇಳುತ್ತಾರೆ.

ಕಾಫಿ ಮಂಡಳಿ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ. ಅಂತಿಮವಾಗಿ, ಮೇ ಮೊದಲ ವಾರದಲ್ಲಿ ಆಲಿಕಲ್ಲುಗಳೊಂದಿಗೆ ಗುಡುಗು ಸಹಿತ ಮಳೆಯು ನಮ್ಮ ಪ್ರದೇಶವನ್ನು ಅಪ್ಪಳಿಸಿತು, ಮೊಳಕೆಯೊಡೆಯುತ್ತಿರುವ ಕಾಫಿ ಬೀಜಗಳು ಮತ್ತು ಕಾಳುಮೆಣಸನ್ನು ಹಾನಿಗೊಳಿಸಿತು ಎನ್ನುತ್ತಾರೆ.

ಬೆಳೆ ನಷ್ಟಕ್ಕೆ ಸರ್ಕಾರ 2000 ರೂಪಾಯಿ ನೀಡುವ ಬದಲು ರಸಗೊಬ್ಬರ, ಕೃಷಿ ಉಪಕರಣಗಳು ಮತ್ತು ಕೀಟನಾಶಕಗಳಿಗೆ ಸರ್ಕಾರ ಸಹಾಯಧನ ನೀಡಬೇಕು ಎಂದರು.

ಉಡುಪಿ ಜಿಲ್ಲೆಯಲ್ಲಿ ಅಡಿಕೆ ಬೆಳಗಾರರಿಗೆ ಮುತ್ತು ಉದುರುವ ಸಮಸ್ಯೆ ಹೆಚ್ಚಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲುವಿನ 55 ವರ್ಷದ ಅಡಿಕೆ ಕೃಷಿಕ ಅಶ್ವಥ್ ನಾರಾಯಣ ಪ್ರಭು ಅವರು ತಮ್ಮ ತೋಟದಲ್ಲಿ ಮಳೆ ಕೊರತೆಯಿಂದ ಹಸಿರು ಬದಲು ಬಿಳಿಯಾಗಿರುವ ಎಳೆಯ ಕಾಯಿಗಳು ಅವಧಿಗೂ ಮುನ್ನ ಉದುರುತ್ತವೆ. ಈ ಹಂಗಾಮಿನಲ್ಲಿ ಇಳುವರಿಯಲ್ಲಿ ಗಣನೀಯ ಕುಸಿತ ಉಂಟಾಗಿ ಅಪಾರ ನಷ್ಟ ಉಂಟುಮಾಡಿದೆ ಎನ್ನುತ್ತಾರೆ.

ಒಂದು ಕೆಜಿ ಅಡಿಕೆ (ಸಿಪ್ಪೆ ಸುಲಿದ) ಈಗ 370 ರೂಪಾಯಿಗೆ ದೊರೆಯುತ್ತಿದ್ದು, ಕಳೆದ ವರ್ಷ ಈ ಹೊತ್ತಿನಲ್ಲಿ 400 ರೂಪಾಯಿಗಳಷ್ಟಿತ್ತು. ಮಾರುಕಟ್ಟೆ ಬೆಲೆಯೂ ಅಷ್ಟೊಂದು ಲಾಭದಾಯಕವಾಗಿಲ್ಲ. ಸುಮಾರು 800 ಬಲಿತ ಅಡಿಕೆ ಮರಗಳನ್ನು ಹೊಂದಿರುವ ಅಶ್ವಥ್ ಅವರು ಅವುಗಳಲ್ಲಿ 300 ಅಡಿಕೆ ಮರಗಳು 30 ವರ್ಷ ಹಳೆಯವು. ಉಳಿದ 500 ಮರಗಳು 15 ವರ್ಷ ಹಳೆಯದಾಗಿದ್ದು, ಕಳೆದ ವರ್ಷ ಅಶ್ವಥ್ ಅವರು ಇನ್ನೂ 500 ಸಸಿಗಳನ್ನು ನೆಟ್ಟಿದ್ದಾರೆ.

ಇಲಾಖೆ ಅಧಿಕಾರಿಗಳನ್ನು ಭೇಟಿಯಾದಾಗ ಪೋಷಕಾಂಶ ನಿರ್ವಹಣೆ ಕೊರತೆಯಿಂದ ಗುಂಡಿ ತೋಡುವ ಸಮಸ್ಯೆ ಉಂಟಾಗುತ್ತಿತ್ತು ಎನ್ನುತ್ತಾರೆ. ಪರೀಕ್ಷೆಗೆ ಮಣ್ಣಿನ ಮಾದರಿ ತೆಗೆದುಕೊಂಡರೆ ವರದಿ ಬರದ ಕಾರಣ ಸರ್ಕಾರಿ ಇಲಾಖೆಗೆ ಮೊರೆ ಹೋಗುವುದನ್ನು ನಿಲ್ಲಿಸಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಅಶ್ವಥ್ ಅವರು ತೆಂಗು ಮತ್ತು ಬಾಳೆ ತೋಟಗಳನ್ನು ಹೊಂದಿರುವುದರಿಂದ, ಹಸುಗಳನ್ನು ಸಾಕುವುದು ಮತ್ತು ಮಲ್ಲಿಗೆಯನ್ನು ಬೆಳೆಸುವುದರಿಂದ ಆದಾಯ ಸ್ವಲ್ಪ ಬರುತ್ತಿದೆ, ಇಲ್ಲದಿದ್ದರೆ ನನ್ನಂತಹ ರೈತರಿಗೆ ಜೀವನ ಸಾಗಿಸುವುದು ಕಷ್ಟ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com