
ಬೆಂಗಳೂರು: ಮಳೆಯಿಂದಾಗಿ ಎದುರಾಗುವ ಅನಾಹುತಗಳ ತಡೆಯಲು ಸಜ್ಜಾಗಿದ್ದೇವೆಂದು ಬಿಬಿಎಂಪಿ ಹೇಳುತ್ತಿದೆ. ಆದರೆ, ಕೇವಲ ಕೆಲವೇ ನಿಮಿಷಗಳ ಕಾಲ ಮಳೆ ಸುರಿದರೂ ನಗರದ ಹಲವೆಡೆ ಜಲಾವೃತವಾದ ಬೆಳವಣಿಗೆಗಳು ನಗರದಲ್ಲಿ ಕಂಡು ಬರುತ್ತಿದೆ.
ನಗರದಲ್ಲಿ ಮಳೆ ಪರಿಣಾಮ ಯಲಹಂಕದ ಪುಟ್ಟೇನಹಳ್ಳಿ ಕೆರ ಅಂಚಿನ ರಣಣಶ್ರೀ ಗಾರ್ಡೇನಿಯಾ ಲೇಔಟ್ ಹಾಗೂ ನಾರ್ತ್ ವುಡ್ ಅಪಾರ್ಟ್ ಮೆಂಟ್ ಕಟ್ಟಡ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.
ಯಲಹಂಕ ಸೇರಿದಂತೆ ಉತ್ತರ ಬೆಂಗಳೂರು ಭಾಗದಲ್ಲಿ ಶನಿವಾರ ಭಾರೀ ಮಳೆ ಸುರಿದಿತ್ತು. ಮಳೆ ನೀರು ಹರಿದು ಹೋಗಲು ಸೂಕ್ತ ಅವಕಾಶ ಇಲ್ಲದೇ, ಸುಮಾರು ಮೂರು ಅಡಿಗೂ ಹೆಚ್ಚು ಪ್ರಮಾಣದ ನೀರು ಇಡೀ ಪ್ರದೇಶವನ್ನು ಆವರಿಸಿತ್ತು. ರಸ್ತೆ ಹಾಗೂ ಅಪಾರ್ಟ್ ಮೆಂಟ್ ನೆಲಮಹಡಿಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದ್ದವು. ಬಿಬಿಎಂಪಿ ಅದಿಕಾರಿಗಳು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ನಿಂತ ನೀರನ್ನು ಪಂಪ್ ಬಳಕೆ ಮಾಡಿ ತೆರವುಗೊಳಿಸಿದರು.
ಕಳೆದ ಒಂದು ವಾರದಿಂದ ನೀರು ಶೇಖರಣೆ ಆಗುತ್ತಿದ್ದಂತೆ ಆತಂಕದಲ್ಲಿ ಈಗಾಗಲೇ ಹಲವರು ಮನೆಗಳನ್ನು ಖಾಲಿ ಮಾಡಿಕೊಂಡು ಹೋಗಿದ್ದರು. ಸ್ಥಳೀಯ ನಿವಾಸಿಗಳು ಈ ಬಗ್ಗೆ ವಾರದ ಹಿಂದೆಯೇ ಬಿಬಿಎಂಪಿಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಅವಾಂತರ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುಟ್ಟೇನಹಳ್ಳಇ ಕೆರೆ ಅರಣ್ಯ ಇಲಾಖೆಯ ಅಧೀನದಲ್ಲಿದೆ. ಬಿಬಿಎಂಪಿಯಿಂದ ಪುಟ್ಟೇನಹಳ್ಳಇ ಕೆರೆಯ ದಂಡೆಯವರೆಗೆ ರಾಜಕಾಲುವೆ ನಿರ್ಮಾಣ ಮಾಡಲಾಗಿದೆ. ಪುಟ್ಟೇನಹಳ್ಳಿ ಕೆರೆಗೆ ರಾಜಕಾಲುವೆ ಸಂಪರ್ಕ ನೀಡಲು 3 ಮೀಟರ್ ಕಾಮಗಾರಿ ಮಾಡಬೇಕು. ಆದರೆ, ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿದು ಬರುತ್ತಿರುವುದರಿಂದ ಅರಣ್ಯ ಇಲಾಖೆ ಅವಕಾಶ ನೀಡಿಲ್ಲ. ಪಾಲಿಕೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಸಮನ್ವಯ ಕೊರತೆಯ ಪರಿಣಾಮ ಜನರು ಸಂಕಷ್ಟಕ್ಕೆ ಒಳಗಾಗಬೇಕಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ನಡುವೆ ಜಲಾವೃತಗೊಂಡ ಮನೆಗಳ ವೀಡಿಯೊಗಳು ವೈರಲ್ ಆದ ನಂತರ ಪಾಲಿಕೆ ಸಿಬ್ಬಂದಿ ಸ್ಳಕ್ಕೆ ಭೇಟಿ ನೀಡಿದರು. ಯಲಹಂಕ ವಲಯ ಆಯುಕ್ತರು ಮತ್ತು ಇಂಜಿನಿಯರ್‌ಗಳು ಬಡಾವಣೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. 15 ಎಚ್‌ಪಿ ಪಂಪ್‌ಗಳನ್ನು ಬಳಸಿ ನಿಂತ ನೀರನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.
Advertisement