ಕಾವೇರಿಗೆ ಕಲುಷಿತ ನೀರು ಹರಿವು: ತಾಂತ್ರಿಕ ಪರಿಣಿತರ ತನಿಖಾ ತಂಡ ರಚಿಸಿ; ಸಿಎಂಗೆ ಶಾಸಕ ದಿನೇಶ್ ಗೂಳಿಗೌಡ ಮನವಿ

ಪರಿಸರ, ಕೈಗಾರಿಕೆ, ನೀರಾವರಿ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ವರ್ಗದ ತಜ್ಞರನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಬೇಕು. ಈ ಸಮತಿಯವರು ಕೂಲಂಕಷವಾಗಿ ಅಧ್ಯಯನ ಮಾಡಿ ಸೂಕ್ತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತಾಗಬೇಕು ಎಂದು ಶಾಸಕರಾದ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.
ದಿನೇಶ್ ಗೂಳಿಗೌಡ
ದಿನೇಶ್ ಗೂಳಿಗೌಡ
Updated on

ಬೆಂಗಳೂರು: ರಾಜ್ಯದ ಜೀವನದಿ ಕಾವೇರಿಗೆ ಕಲುಷಿತ ಮಿಶ್ರಿತ ನೀರು ಪೂರೈಕೆಯಾಗುತ್ತಿದೆ ಎಂದು ಮಾದ್ಯಮಗಳಲ್ಲಿ ವರದಿ ಆಗಿದ್ದು ಅನಾಹುತ ತಡೆಯಲು ತಾಂತ್ರಿಕ ಪರಿಣಿತರ ತನಿಖಾ ತಂಡವನ್ನು ರಚನೆ ಮಾಡಬೇಕು. ಈ ತಂಡವು ಅಧ್ಯಯನ ನಡೆಸಿ ವರದಿ ನೀಡಿದ ಬಳಿಕ ಸರ್ಕಾರ ಸೂಕ್ತ ಕ್ರಮ ವಹಿಸಬೇಕು ಎಂದು ಶಾಸಕ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.

ಈ ಸಂಬಂಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಪತ್ರ ಬರೆದಿರುವ ಶಾಸಕರಾದ ದಿನೇಶ್ ಗೂಳಿಗೌಡ ಅವರು, ತ್ಯಾಜ್ಯ ಮಿಶ್ರಿತ ನೀರಿನಿಂದ ‍ಕಾವೇರಿ ನದಿ ನೀರು ಕಲುಷಿತ ಆಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳು ಈ ಬಗ್ಗೆ ತುರ್ತು ಗಮನಹರಿಸಬೇಕಿದೆ. ಕೂಡಲೇ ತಾಂತ್ರಿಕ ಪರಿಣಿತರ ತನಿಖಾ ತಂಡವನ್ನು ರಚನೆ ಮಾಡಬೇಕಿದೆ ಎಂದು ಮನವಿ ಮಾಡಿದ್ದಾರೆ.

ಸಮಿತಿಯಲ್ಲಿ ಯಾರೆಲ್ಲ ಇರಬೇಕು? ಪರಿಸರ, ಕೈಗಾರಿಕೆ, ನೀರಾವರಿ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ವರ್ಗದ ತಜ್ಞರನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಬೇಕು. ಈ ಸಮತಿಯವರು ಕೂಲಂಕಷವಾಗಿ ಅಧ್ಯಯನ ಮಾಡಿ ಸೂಕ್ತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತಾಗಬೇಕು ಎಂದು ಶಾಸಕರಾದ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ? ರಾಜ್ಯದ ರಾಜಧಾನಿ ಬೆಂಗಳೂರು ಪ್ರಪಂಚದಲ್ಲಿ ವೇಗವಾಗಿ‌ ಬೆಳೆಯುತ್ತಿರುವ ನಗರಗಳ ಸಾಲಿನಲ್ಲಿ ಅಗ್ರ ‌ಸ್ಥಾನ‌ ಗಳಿಸಿದೆ. ದೇಶದ 5ನೇಯ ದೊಡ್ಡ ಮೆಟ್ರೋಪಾಲಿಟನ್ ಪ್ರದೇಶವಾಗಿದೆ. ಪ್ರಸ್ತುತ ಬೆಂಗಳೂರು ನಗರ ಸುಮಾರು 1.5 ಕೋಟಿಗೂ ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ಬೆಂಗಳೂರಿನ ‌ವಿಸ್ತೀರ್ಣ 741 ಚ.ಕಿ.ಮೀ ವ್ಯಾಪ್ತಿಯನ್ನು ಮೀರಿದೆ. ಬೆಂಗಳೂರಿನ ಜನರ ಅತ್ಯವಶ್ಯ ಮೂಲಭೂತ ಸೌಲಭ್ಯವಾದ ‌ಕುಡಿಯುವ ನೀರು ಪೂರೈಸಲು ನಾನಾ ಮೂಲಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಅದರಲ್ಲಿ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಸಿಂಹಪಾಲು ರಾಜ್ಯದ ಪ್ರಮುಖ ಜೀವ ನದಿಯಾದ ಕಾವೇರಿಯದ್ದಾಗಿದೆ.

ಕಾವೇರಿ ನದಿಯಿಂದ ಬೆಂಗಳೂರು ನಗರದ ಕುಡಿಯುವ ನೀರು ಪೂರೈಕೆಗಾಗಿ 19 ಟಿಎಂಸಿ ನೀರನ್ನು ಬಳಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಪ್ರಸ್ತುತ ಬೆಂಗಳೂರು ಜಲಮಂಡಳಿಯು ಕಾವೇರಿ ನೀರು ಸರಬರಾಜು ಯೋಜನೆಯ ಮೂಲಕ 1,440 ಎಂಎಲ್ಡಿಯಷ್ಟು ನೀರನ್ನು ನಗರಕ್ಕೆ ಪೂರೈಸುತ್ತಿದೆ. ಬೆಂಗಳೂರು ನಗರ ಮಾತ್ರವಲ್ಲದೆ ಬೆಂಗಳೂರು ಗ್ರಾಮಾಂತರ, ಮೈಸೂರು ಮತ್ತು ಮಂಡ್ಯ, ಚಾಮರಾಜನಗರ, ರಾಮನಗರ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ದಾಹವನ್ನು ನೀಗಿಸುತ್ತಿರುವ ಕಾವೇರಿ ನದಿ ನೀರು ಇಂದು ಹಾಲಾಹಲವಾಗಿ ಮಾರ್ಪಡುತ್ತಿದೆ. ಒಳಚರಂಡಿ ನೀರು ಹಾಗೂ ಹಲವು ಕೈಗಾರಿಕೆಗಳ ತ್ಯಾಜ್ಯದಿಂದ ನದಿಯು ನೈಸರ್ಗಿಕ ಗುಣ ಕಳೆದುಕೊಳ್ಳುತ್ತಿದೆ.

ದಿನೇಶ್ ಗೂಳಿಗೌಡ
ಕಾವೇರಿ ಮೇಲಿನ ಒತ್ತಡ ಇಳಿಸಲು ಕ್ರಮ: ಪ್ರತಿದಿನ ಕೋಟಿ ಲೀಟರ್‌ ಸಂಸ್ಕರಿತ ನೀರು ಉತ್ಪಾದನೆಗೆ BWSSB ಮುಂದು!

ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಉಗಮಿಸುವ ಕಾವೇರಿ ಹರಿಯುವ ಮಾರ್ಗದ ಕುಶಾಲನಗರ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ,‌ ನಂಜನಗೂಡು, ಟಿ.ನರಸೀಪುರ, ಕೊಳ್ಳೇಗಾಲ ಮುಂತಾದ ಪ್ರಮುಖ ನಗರ-ಪಟ್ಟಣಗಳ ಭಾಗದಲ್ಲಿ ಹಲವು ಕಾರ್ಖಾನೆಗಳು ತಲೆ ಎತ್ತಿದ್ದು ಅದರ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸದೆ‌ ನೇರವಾಗಿ ನದಿಗೆ ಹರಿಯ ಬೀಡುತ್ತಿರುವುದರಿಂದ ನದಿಯ ನೀರು ಕಲುಷಿತಗೊಂಡು ಮಲಿನಗೊಳ್ಳುತ್ತಿದೆ. ಕೈಗಾರಿಕಾ ಪ್ರದೇಶದಿಂದ ಶುದ್ದೀಕರಿಸದ ತ್ಯಾಜ್ಯ ನೀರು ನದಿ ಸೇರುತ್ತಿದ್ದು ಕೆಮಿಕಲ್ ಮಿಶ್ರಿತ ನೀರಿನಿಂದ ಜಲಚರಗಳಿಗೆ ಮಾರಣಾಂತಿಕವಾಗುತ್ತಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2023ರಲ್ಲಿ ನದಿಗಳ ಮಾಲಿನ್ಯದ ಬಗ್ಗೆ ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಕಾವೇರಿ ಕೂಡ ಸೇರಿದೆ. ನದಿ ನೀರನ್ನು ಪರೀಕ್ಷೆಗೆ ಒಳಪಡಿಸಬೇಕು. ಅದರ ಗುಣಮಟ್ಟದ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕಿದೆ ಎಂದು ಕೂಡ ಸದರಿ ವರದಿ ತಿಳಿಸಿದೆ. ಸಿಪಿಸಿಬಿ ವರದಿ ಪ್ರಕಾರ, ಶುದ್ಧ ನೀರಿನಲ್ಲಿ ಪ್ರತಿ ಲೀಟರ್ ನೀರಿನಲ್ಲಿ 1 ಎಂಜಿಗಿಂತ ಕಡಿಮೆ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ (ಬಿಒಡಿ) ಪ್ರಮಾಣ ಇರಬೇಕು. ಆದರೆ, ಕಾವೇರಿ ನದಿಯಲ್ಲಿ ಹೆಚ್ಚು ಇದೆ ಎಂಬುದನ್ನು ತಿಳಿಸಿದೆ. ಇದು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ.

ತನಿಖಾ ತಂಡ ರಚನೆಯಾಗಲಿ: ಕೈಗಾರಿಕೆ ತ್ಯಾಜ್ಯ, ಘನ ತ್ಯಾಜ್ಯ ಅಪಾಯದ ಪ್ರಮಾಣ ಮೀರಿ ನದಿ ನೀರಿಗೆ ಸೇರ್ಪಡೆಯಾಗುತ್ತಿರುವುದರಿಂದ ಇದರ ತಡೆಗೆ ಸರ್ಕಾರ ಕ್ರಮವಹಿಸಬೇಕಿದೆ. ಇದಕ್ಕಾಗಿಯೇ ತಾಂತ್ರಿಕ ಪರಿಣಿತರ ತನಿಖಾ ತಂಡವನ್ನು ರಚನೆ ಮಾಡುವುದರಿಂದ ಕೈಗಾರಿಕಾ ಪ್ರದೇಶ, ಯುಜಿಡಿ ಮಿಕ್ಸಿಂಗ್ ಲಿಂಕ್, ಹೋಟೆಲ್ ಹಾಗೂ ರೆಸಾರ್ಟ್ ಇತರ ಪ್ರದೇಶಗಳಿಂದ ಬರುವ ಮಲಿನ ನೀರು ಪವಿತ್ರ ಕಾವೇರಿ ನದಿ ಒಡಲು ಸೇರದಂತೆ ನಿಗಾವಹಿಸಬಹುದಾಗಿದೆ. ಇದರಿಂದ ಸರ್ಕಾರ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಮೂಲಕ ಆರೋಗ್ಯವನ್ನು ಕಾಪಾಡಲು ಸಹಾಯಕವಾಗಲಿದೆ. ನದಿ ನೀರು ಸ್ವಚ್ಛವಾಗಿ ಜಲಚರಗಳು, ನದಿ ನೀರು ಅವಲಂಬಿತ ಪ್ರದೇಶಗಳ ಜನರ ಆರೋಗ್ಯ ಕೂಡ ಸುಧಾರಿಸಲಿದೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com