
ದಾವಣಗೆರೆ: ಮೇ 24 ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾದ ಆದಿಲ್ (33) ಎಂಬಾತನ ಮರಣೋತ್ತರ ಪರೀಕ್ಷೆಯ ವರದಿಯನ್ನು ಸಿಐಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಲೋ ಬಿಪಿ, ಹೃದಯ ಸ್ತಂಭನದಿಂದಾಗಿ ಆದಿಲ್ ಸಾವಿಗೀಡಾಗಿರಬಹುದು ಎಂದು ಮೂಲಗಳು ಬಹಿರಂಗಪಡಿಸಿವೆ.
ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದಡಿ ಆದಿಲ್ (30) ಎಂಬಾತನನ್ನು ಮೇ 24ರಂದು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ನಂತರ ಆತನ ಆರೋಗ್ಯ ಸ್ಥಿತಿ ಹದಗೆಟ್ಟಿತು ಮತ್ತು ಆತ ಠಾಣೆಯಲ್ಲಿಯೇ ಮೃತಪಟ್ಟಿದ್ದರು. ಆದಿಲ್ ಅವರ ಸಂಬಂಧಿಕರು ಪೊಲೀಸರ ಚಿತ್ರಹಿಂಸೆಯಿಂದಲೇ ಆತ ಸಾವಿಗೀಡಾಗಿದ್ದಾನೆ ಎಂದು ಆರೋಪಿಸಿದ್ದರು. ಈ ಸುದ್ದಿ ಹರಡುತ್ತಿದ್ದಂತೆಯೇ ಉದ್ರಿಕ್ತರ ಗುಂಪೊಂದು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿತ್ತು ಮತ್ತು ವಾಹನಗಳಿಗೆ ಹಾನಿಯುಂಟುಮಾಡಿತ್ತು.
ಪೊಲೀಸರು ಪೊಲೀಸ್ ಠಾಣೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದರೆ, ಕಸ್ಟಡಿ ಸಾವಿನ ಬಗ್ಗೆ ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿ ತನಿಖೆ ನಡೆಸುತ್ತಿದ್ದಾರೆ.
ಘಟನೆಯ ನಂತರ ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಸರ್ಕಲ್ ಇನ್ಸ್‌ಪೆಕ್ಟರ್ ನಿರಂಜನ್ ಬಿ ಮತ್ತು ಪಿಎಸ್‌ಐ ಅಕ್ತರ್ ಅವರನ್ನು ಕರ್ತವ್ಯಲೋಪದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.
ಉದ್ರಿಕ್ತರ ಗುಂಪನ್ನು ನಿಯಂತ್ರಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಿದ್ದು, ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಮತ್ತು ಬಜರಂಗದಳ ಮತ್ತು ವಿಎಚ್‌ಪಿ ಸದಸ್ಯರು ಒತ್ತಾಯಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ತಮ್ಮನ್ನು ರಕ್ಷಿಸುತ್ತದೆ ಎಂಬ ವಿಶ್ವಾಸದಲ್ಲಿರುವುದರಿಂದ ಮುಂದಿನ ಯಾವುದೇ ಪರಿಣಾಮಗಳ ಬಗ್ಗೆ ಪೊಲೀಸ್ ಠಾಣೆ ಧ್ವಂಸಗೊಳಿಸಿದ ಗುಂಪಿನ ಸದಸ್ಯರು ಯಾರಿಗೂ ಹೆದರುತ್ತಿಲ್ಲ ಎಂದು ರಘುಪತಿ ಭಟ್ ಆರೋಪಿಸಿದ್ದಾರೆ.
Advertisement