
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ 45 ಗಂಟೆಗಳ ಕಾಲ ಧ್ಯಾನ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಇದು ಪ್ರಧಾನಿಯವರ ಖಾಸಗಿ ವಿಚಾರವಾಗಿದ್ದು, ಇದರಲ್ಲಿ ನಾವ್ಯಾಕೆ ಮಧ್ಯಪ್ರವೇಶಿಸಬೇಕು ಎಂದು ಹೇಳಿದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ದೇವರು, ಭಕ್ತಿ ಎಂಬುದು ಅವರ ಖಾಸಗಿ ವಿಚಾರ. ಅದರಲ್ಲಿ ನಾವ್ಯಕೆ ಮಧ್ಯಪ್ರವೇಶಿಸಬೇಕು? ನಾವು ಅವರ ಪ್ರಾರ್ಥನೆ ಮತ್ತು ಧ್ಯಾನದಲ್ಲಿ ಏಕೆ ಹಸ್ತಕ್ಷೇಪ ಮಾಡಬೇಕು? ಎಂದರು.
ರೋಡ್ ಶೋ, ರ‍್ಯಾಲಿ ಸೇರಿದಂತೆ 200 ಕ್ಕೂ ಹೆಚ್ಚು ಚುನಾವಣಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಾಷಣ ಮಾಡಿದ್ದ ಪ್ರಧಾನಿ ಮೋದಿ, ಪ್ರಚಾರದ ಕೊನೆಯ ದಿನ ಪ್ರಶಾಂತವಾದ ಸ್ಥಳದಲ್ಲಿ ಧ್ಯಾನ ಮಾಡುತ್ತಾರೆ. ಅದೇ ರೀತಿ ಇಂದು ಸಂಜೆಯಿಂದ ನಾಳೆಯವರೆಗೂ ತಮಿಳುನಾಡಿನ ಕನ್ಯಾಕುಮಾರಿಯ ವಿವೇಕಾನಂದ ಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ.
ಇದು ಭಾರತದ ದಕ್ಷಿಣದ ತುದಿಯಾಗಿದ್ದು, ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿ ಸಂಧಿಸುವ ಸ್ಥಳವಾಗಿದೆ. ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮ ಸ್ಥಳವಾಗಿದೆ. ಪ್ರಧಾನಿ ಮೋದಿಯವರು ಕನ್ಯಾಕುಮಾರಿಗೆ ಹೋಗುವ ಮೂಲಕ ರಾಷ್ಟ್ರೀಯ ಏಕತೆಯ ಸಂಕೇತವನ್ನು ರವಾನಿಸುತ್ತಿದ್ದಾರೆ. ಇದೇ ರೀತಿಯಲ್ಲಿ 2019ರಲ್ಲಿ ಕೇದಾರನಾಥಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ 2014ರಲ್ಲಿ ಶಿವಾಜಿಯ ಪ್ರತಾಪಗಢಕ್ಕೆ ಭೇಟಿ ನೀಡಿದ್ದರು. ಪ್ರಧಾನಿಯವರು ಈ ವರ್ಷ ಮಾರ್ಚ್ 16 ರಂದು ಕನ್ಯಾಕುಮಾರಿಯಿಂದಲೇ ಚುನಾವಣಾ ಪ್ರಚಾರ ಆರಂಭಿಸಿದ್ದರು.
ಜೂನ್ 1 ರಂದು ನಡೆಯಲಿರುವ ಕೊನೆಯ ಹಂತದ ಲೋಕಸಭೆ ಚುನಾವಣೆಗೆ ಮುನ್ನ ಮೋದಿ ಅವರು ತಮ್ಮ ಧ್ಯಾನ ಮೂಲಕ ಮೌನ ಅವಧಿಯ ನಿರ್ಬಂಧಗಳನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಲಿದ್ದು, ಅದನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ನೋಡಿಕೊಳ್ಳುವಂತೆ ಚುನಾವಣಾ ಆಯೋಗವನ್ನು ಕಾಂಗ್ರೆಸ್ ಬುಧವಾರ ಒತ್ತಾಯಿಸಿತ್ತು.
Advertisement