ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ನಾಮನಿರ್ದೇಶನ ವಾಪಸ್: ಸರ್ಕಾರದ ಕ್ರಮವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್‌

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಹುದ್ದೆಗೆ ನೇಮಿಸಲಾಗಿದ್ದ ಮಾಜಿ ಎಂಎಲ್‌ಸಿ ಅಬ್ದುಲ್‌ ಅಜೀಂ ಅವರ ನಾಮನಿರ್ದೇಶನ ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿದ್ದು, ಸರ್ಕಾರದ ನಡೆಯನ್ನು ಪ್ರಶ್ನಿಸಿ ಅಬ್ದುಲ್ ಅಜೀಂ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಹುದ್ದೆಗೆ ನೇಮಿಸಲಾಗಿದ್ದ ಮಾಜಿ ಎಂಎಲ್‌ಸಿ ಅಬ್ದುಲ್‌ ಅಜೀಂ ಅವರ ನಾಮನಿರ್ದೇಶನ ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿದ್ದು, ಸರ್ಕಾರದ ನಡೆಯನ್ನು ಪ್ರಶ್ನಿಸಿ ಅಬ್ದುಲ್ ಅಜೀಂ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾಯ್ದೆಯ ಸೆಕ್ಷನ್ 4ರ ಪ್ರಕಾರ ಸ್ವತಃ ಅಧ್ಯಕ್ಷರು ಸರ್ಕಾರದ ನಿರ್ಧಾರಕ್ಕೆ ಒಳಪಟ್ಟು ಕಾರ್ಯನಿರ್ವಹಿಸುತ್ತಾರೆ ಎಂದು ಸೂಚಿಸುತ್ತದೆ ಎಂಬ ಸರ್ಕಾರದ ವಾದವನ್ನು ಒಪ್ಪಿಕೊಂಡ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಸರ್ಕಾರದ ಅಧೀನದಲ್ಲಿರುವ ಆಯೋಗಗಳಿಗೆ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡುವುದು ಮತ್ತು ವಾಪಸ್‌ ಪಡೆಯುವುದು ಸರ್ಕಾರದ ವಿವೇಚನೆಗೆ ಒಳಪಟ್ಟಿದ್ದು, ಈ ಪ್ರಕ್ರಿಯೆಯಲ್ಲಿ ನೋಟಿಸ್‌ ನೀಡದೆ ಏಕಪಕ್ಷೀಯವಾಗಿ ನಾಮ ನಿರ್ದೇಶನ ಹಿಂಪಡೆದಿದೆ ಎಂಬ ಕಾರಣವೊಡ್ಡಿ ಸರ್ಕಾರದ ಕ್ರಮ ಪ್ರಶ್ನಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಅಜೀಂ ಅವರನ್ನು 2019 ರಲ್ಲಿ ಆಗಿನ ಬಿಜೆಪಿ ಸರ್ಕಾರವು ಮೂರು ವರ್ಷಗಳ ಅವಧಿಗೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತ್ತು. 2022 ರಲ್ಲಿ ಅವರ ಅಧಿಕಾರಾವಧಿಯನ್ನು ಇನ್ನೂ ಮೂರು ವರ್ಷಗಳ ಅವಧಿಗೆ ವಿಸ್ತರಿಸಲಾಯಿತು. ಅದರಂತೆ 2025ರ ಅಕ್ಟೋಬರ್ 15 ರಂದು ಅವಧ ಅಧಿಕಾರವಧಿ ಕೊನೆಗೊಳ್ಳಬೇಕಿತ್ತು. 2023ರ ಮೇನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ಈ ವೇಳೆ ಹಿಂದಿನ ಬಿಜೆಪಿ ಸರ್ಕಾರ ಮಾಡಿದ್ದ ಎಲ್ಲ ನಾಮನಿರ್ದೇಶನಗಳನ್ನು ರದ್ದುಗೊಳಿಸಿತು. ಅದರಂತೆ, ಅಜೀಂ ಅವರ ನಾಮ ನಿರ್ದೇಶನವನ್ನು ಹಿಂಪಡೆಯಲಾಯಿತು.

ಅಜೀಂ ಅವರು ಇನ್ನೂ 2 ವರ್ಷ ಮತ್ತು 5 ತಿಂಗಳ ಅವಧಿಗೆ ಅಧ್ಯಕ್ಷರಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಅವಕಾಶ ಮಾಡಿಕೊಡುವಂತೆ 2023ರ ಮೇನಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದನ್ನು ಪರಿಗಣಿಸಲು ವಿಳಂಬವಾದಾಗ ಅವರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ಪ್ರಾತಿನಿಧಿಕ ಚಿತ್ರ
ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಪಡಿಸಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ರಾಜ್ಯ ಸರ್ಕಾರ ಅವರ ಅಧ್ಯಕ್ಷ ಸ್ಥಾನವನ್ನು ರದ್ದುಗೊಳಿಸಿತು. ಡಿಸೆಂಬರ್ 19, 2023 ರಂದು, ಅಜೀಂ ಅವರ ನಾಮ ನಿರ್ದೇಶನವನ್ನು ಹಿಂಪಡೆಯುವ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯನ್ನು ಹೈಕೋರ್ಟ್ ನೀಡಿತು. ಈ ಮಧ್ಯಂತರ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿಯಲ್ಲಿ, ಅರ್ಜಿದಾರರು ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿದೆ.

ಅರ್ಜಿದಾರರನ್ನು ಆಯೋಗದ ಹುದ್ದೆಯಿಂದ ತೆಗೆದು ಹಾಕಬೇಕಾದರೆ ನೋಟಿಸ್‌ ಜಾರಿ ಮಾಡಬೇಕೆಂದು ಸೆಕ್ಷನ್‌ 5ರಲ್ಲಿ ಹೇಳಲಾಗಿದೆಯೆಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಆದರೆ, ಸೆಕ್ಷನ್‌ 5 ಆಯೋಗದ ಅಧ್ಯಕ್ಷರನ್ನು ಅನರ್ಹಗೊಳಿಸುವ ಪ್ರಕ್ರಿಯೆಯಾಗಿದೆ. ಆದರೆ, ಸರ್ಕಾರ ಅವರನ್ನು ಅನರ್ಹಗೊಳಿಸಿಲ್ಲ. ಬದಲಿಗೆ ಹುದ್ದೆಗೆ ಆಗಿದ್ದ ನಾಮ ನಿರ್ದೇಶನವನ್ನು ಹಿಂಪಡೆದಿದೆ. ಆದ್ದರಿಂದ ನೋಟಿಸ್‌ ಜಾರಿ ಮಾಡಿ ಅವರ ಪ್ರತಿಕ್ರಿಯೆ ಕೇಳಬೇಕೆಂಬ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com