
ಬೆಂಗಳೂರು: ಹೈಕೋರ್ಟ್ ವಕೀಲೆ ಹಾಗೂ ಕೆಎಎಸ್ ಅಧಿಕಾರಿ ಪತ್ನಿ ಚೈತ್ರಾ ಗೌಡ ಅನುಮಾನಾಸ್ಪದ ಸಾವು ಪ್ರಕರಣವನ್ನು ಸಿಸಿಬಿ ತನಿಖೆಗೆ ವರ್ಗಾಯಿಸಲಾಗಿದೆ.
ಕೆಐಡಿಬಿ ಅಧಿಕಾರಿ ಶಿವಕುಮಾರ್ ಅವರ ಪತ್ನಿಯಾಗಿದ್ದ ಚೈತ್ರಾ ಗೌಡ ಹೈಕೋರ್ಟ್ ವಕೀಲರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಚೈತ್ರಾ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದವು.
ಸೂಕ್ತ ತನಿಖೆಗೆ ಆಗ್ರಹಿಸಿ ಬೆಂಗಳೂರು ನಗರ ವಕೀಲರ ಸಂಘದಿಂದ ಕೂಡ ಪೊಲೀಸ್ ಕಮಿಷನರ್ ಹಾಗೂ ಉತ್ತರ ವಿಭಾಗದ ಡಿಸಿಪಿಗೆ ಪತ್ರ ಬರೆಯಲಾಗಿತ್ತು. ಚೈತ್ರಾ ಅತ್ಯಂತ ದಿಟ್ಟ ಹಾಗೂ ಧೈರ್ಯವಂತೆ ಆಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ ಎಂದು ವಕೀಲರ ಸಂಘ ತಿಳಿಸಿತ್ತು.
ಚೈತ್ರಾ ಮನೆಯಲ್ಲಿ ಸಿಕ್ಕ ಡೆತ್ನೋಟ್ನಲ್ಲಿ ಮೂರು ತಿಂಗಳ ಹಳೇ ದಿನಾಂಕ ನಮೂದಿಸಲಾಗಿದೆ. ಖಿನ್ನತೆಗೆ ಒಳಗಾಗಿರುವುದಾಗಿ, ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾರೆ ಎಂದು ತಿಳಿದುಬಂದಿತ್ತು.
ಇದೀಗ ಸಿಸಿಬಿ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಚೈತ್ರಾ ಜೊತೆಗೆ ಮಾತನಾಡಿರುವ ವ್ಯಕ್ತಿಗಳ ಕಾಲ್ ಲಿಸ್ಟ್ ತೆಗೆಯಲು ಅಧಿಕಾರಿಗಳು ಮುಂದಾಗಿದ್ದಾರೆ. ಚೈತ್ರಾ ಮೊಬೈಲ್ ಲಾಕ್ ಆಗಿದ್ದು, ಅದನ್ನು ಓಪನ್ ಮಾಡಲು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಅಲ್ಲದೇ, ಚೈತ್ರಾ ಸಾವಿಗೂ ಹಿಂದಿನ 15 ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆಗೆ ನಡೆಸುತ್ತಿದ್ದಾರೆ. ಸಧ್ಯ ಚೈತ್ರಾ ಮರಣೋತ್ತರ ಪರೀಕ್ಷೆಯ ವರದಿಗಾಗಿ ಸಿಸಿಬಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಮೇ 11 ರಂದು ಚೈತ್ರಾಗೌಡ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್ ನೋಟ್‍ನಲ್ಲಿ ಖಿನ್ನತೆಗೆ ಒಳಗಾಗಿದ್ದು, ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿತ್ತು. ಇದರ ಬೆನ್ನಲ್ಲ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಮೂಡಿದ್ದವು.
Advertisement