
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ಬಿ ನಾಗೇಂದ್ರ ಅವರ ವಿರುದ್ಧದ ಆರೋಪಗಳ ವಾಸ್ತವಾಂಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶೀಲಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.
ಹಗರಣ ನಡೆದಿರುವುದನ್ನು ಒಪ್ಪಿಕೊಂಡಿರುವ ಗೃಹ ಸಚಿವ ಜಿ ಪರಮೇಶ್ವರ ಅವರು, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ರಾಜೀನಾಮೆ ನೀಡಬೇಕೇ ಬೇಡವೇ ಎಂಬುದನ್ನು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ ಎಂದರು.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ(ಕೆಎಂವಿಎಸ್‌ಟಿಡಿಸಿ) ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದ್ದು, ಕಳೆದ ಭಾನುವಾರ ಅಕೌಂಟ್ಸ್ ಸೂಪರಿಂಟೆಂಡೆಂಟ್ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಹಣ ದುರುಪಯೋಗದ ವಿವರವನ್ನು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಸಭೆ ನಡೆಸಿ ಚರ್ಚೆ ನಡೆಸಿದ್ದು, ಈ ಸಭೆಯಲ್ಲಿ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ.
ನಾನು ಮತ್ತು ಮುಖ್ಯಮಂತ್ರಿಗಳು ವಾಸ್ತವಾಂಶವನ್ನು ಪರಿಶೀಲಿಸುತ್ತಿದ್ದೇವೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಭೆಯ ನಂತರ ಡಿಕೆ ಶಿವಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಚಿವರ ರಾಜೀನಾಮೆಗೆ ಬಿಜೆಪಿ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿರುವ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ಈಗಲೇ ಪ್ರತಿಭಟನೆ ಮಾಡಲಿ, ಅಲ್ಲಿಯವರೆಗೆ ಏಕೆ ಕಾಯಬೇಕು? ಇಲ್ಲಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂಜಿ ರಸ್ತೆ ಶಾಖೆಯಲ್ಲಿರುವ ಕೆಎಂವಿಎಸ್‌ಟಿಡಿಸಿ ಬ್ಯಾಂಕ್ ಖಾತೆಯಿಂದ ಅದೇ ಬ್ಯಾಂಕ್‌ನ ಇತರ ಶಾಖೆಗಳಿಗೆ 88.62 ಕೋಟಿ ರೂ.ಗಳನ್ನು ಯಾವುದೇ ಅನುಮತಿಯಿಲ್ಲದೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ ಮತ್ತು ನಂತರ ಹಣವನ್ನು ಕೆಲವು ಸಾಫ್ಟ್‌ವೇರ್ ಕಂಪನಿಗಳ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದರು.
ಇನ್ನು ಹಗರಣದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ನಾಗೇಂದ್ರ ರಾಜೀನಾಮೆ ಕುರಿತು ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
"ನೋಡೋಣ, ಮುಖ್ಯಮಂತ್ರಿ ನಿರ್ಧರಿಸುತ್ತಾರೆ." ಅವ್ಯವಹಾರ ನಡೆದಿರುವುದು ನಿಜ ಆದರೆ ‘ಸಚಿವರಿಗೆ ತಿಳಿಯದಂತೆ ನಡೆದಿದೆಯೇ ಎಂಬುದನ್ನು ಪರಿಶೀಲಿಸಬೇಕು. ಯಾರು ಮಾಡಿದ್ದಾರೆ ಎಂಬುದನ್ನು ನೋಡಬೇಕು. ಸಚಿವರ ಗಮನಕ್ಕೆ ತಂದ ನಂತರವೂ ಅವ್ಯವಹಾರ ನಡೆದಿದ್ದರೆ ಸಚಿವರೇ ಜವಾಬ್ದಾರರು ಎಂದರು.
ಸಿಬಿಐ ತನಿಖೆಯ ಬೇಡಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, 3 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಹಗರಣಗಳಲ್ಲಿ(ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ) ಪ್ರಕರಣವನ್ನು ಸಿಬಿಐಗೆ ನೀಡುವುದು ಕಾರ್ಯವಿಧಾನವಾಗಿದೆ ಎಂದು ಹೇಳಿದರು.
Advertisement