
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಶುಕ್ರವಾರ ವಿಶೇಷ ತನಿಖಾ ತಂಡವನ್ನು(ಎಸ್‌ಐಟಿ) ರಚಿಸಿ ಆದೇಶ ಹೊರಡಿಸಿದೆ.
ಸಿಐಡಿ ಆರ್ಥಿಕ ಅಪರಾಧ ವಿಭಾಗದ ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದಲ್ಲಿ ನಾಲ್ವರು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚನೆ ಮಾಡಲಾಗಿದೆ.
ಇನ್ನು ಎಸ್ಐಟಿ ವರದಿ ಆಧರಿಸಿಯೇ ಸಚಿವ ಬಿ.ನಾಗೇಂದ್ರ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಆ ಮೂಲಕ SIT ವರದಿ ಬರುವವರೆಗೆ ಕಾದು ನೋಡಲು ಸರ್ಕಾರ ತೀರ್ಮಾನ ಮಾಡಿದೆ.
ಶಿವಮೊಗ್ಗದ ವಿನೋಬಾ ನಗರದ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರನ್ ಅವರ ಪತ್ನಿ ದಾಖಲಿಸಿರುವ ದೂರು ಹಾಗೂ ಮೃತ ಅಧಿಕಾರಿಯ ಡೆತ್ ನೋಟ್ ಆಧಾರದ ಮೇಲೆ ಎಸ್‌ಐಟಿ ತನಿಖೆ ನಡೆಸಲಿದೆ.
ತನಿಖಾ ವರದಿಯನ್ನು ಆದಷ್ಟು ಬೇಗ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಎಸ್‌ಐಟಿಗೆ ಸೂಚಿಸಲಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಸೂಪರಿಂಟೆಂಡೆಂಟ್ ಚಂದ್ರಶೇಖರನ್ ಅವರು ಭಾನುವಾರ ಸಂಜೆ ಆತ್ಮಹತ್ಯೆಗೆ ಶರಣಾದ ನಂತರ ನಿಗಮದ ಬ್ಯಾಂಕ್ ಖಾತೆಯಿಂದ 88.62 ಕೋಟಿ ರೂ.ಗಳನ್ನು ಅನಧಿಕೃತವಾಗಿ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಅಕ್ರಮವಾಗಿ ಹಣವನ್ನು ವರ್ಗಾಯಿಸಲು ಸಚಿವ ಬಿ ನಾಗೇಂದ್ರ ಅವರು ಮೌಖಿಕ ಆದೇಶ ನೀಡಿದ್ದಾರೆ ಎಂಬ ಆರೋಪಿಸಲಾಗಿದೆ.
Advertisement