ಬೆಂಗಳೂರು: ವಕ್ಫ್ ಮಂಡಳಿಯ ಅಕ್ರಮಗಳ ಬಗ್ಗೆ ಜಾರಿ ನಿರ್ದೇಶನಾಲಯ (ED) ಮತ್ತು ಕೇಂದ್ರೀಯ ತನಿಖಾ ದಳ (CBI) ತನಿಖೆ ನಡೆಸಬೇಕು ಎಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.
ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ, 1974ರ ವಕ್ಫ್ ಆಸ್ತಿ ಗೆಜೆಟ್ ನೋಟಿಫಿಕೇಶನ್ ಹಿಂಪಡೆಯಲು ಹಾಗೂ ಅಧಿಕಾರ ದುರುಪಯೋಗ ಆರೋಪದ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿ ನವೆಂಬರ್ 4ರಂದು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.
ಹಣದ ಲಾಭಕ್ಕಾಗಿ ಕರ್ನಾಟಕ ವಕ್ಫ್ ಮಂಡಳಿಯಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ ಡಾ. ಅಶ್ವತ್ಥ ನಾರಾಯಣ, ಕಳೆದ 50 ವರ್ಷಗಳಿಂದ ಸೃಷ್ಟಿಸಿದ ದಾಖಲೆಗಳು ಈಗ ಅಲ್ಪಸಂಖ್ಯಾತರ ಓಲೈಕೆ ಹಾಗೂ ಮತ ಬ್ಯಾಂಕ್ ರಾಜಕಾರಣಕ್ಕೆ ಬಳಕೆಯಾಗುತ್ತಿವೆ. ಈ ಕಾಯ್ದೆಯಡಿ ರಚಿಸಲಾದ ಎಲ್ಲಾ ದಾಖಲೆಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ ಎಂದರು.
ಅಲ್ಪಸಂಖ್ಯಾತರ ಓಲೈಕೆಗಾಗಿ ಮೂಲತಃ ಕಾಂಗ್ರೆಸ್ ಜಾರಿಗೊಳಿಸಿದ ವಕ್ಫ್ ಕಾಯ್ದೆಯ ದುರುಪಯೋಗದ ಬಗ್ಗೆ "ರೈತರು, ಮಠಗಳು ಮತ್ತು ಹಿಂದೂ ದೇವಾಲಯಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇದರಿಂದ ರೈತರು ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಕೇವಲ ನೋಟೀಸ್ ಹಿಂಪಡೆಯುವುದು ಸಾಕಾಗುವುದಿಲ್ಲ. ರೈತರ ಹೆಸರನ್ನು ಆಸ್ತಿ ದಾಖಲೆಗಳಿಗೆ ಮರುಸ್ಥಾಪಿಸಬೇಕು ಮತ್ತು 1974 ರ ಗೆಜೆಟ್ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
Advertisement