ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುವುದು ಬಿಟ್ಟು ನಿಮ್ಮ ಕುಟುಂಬದ ವಿರುದ್ಧ ಕೇಳಿಬಂದಿರುವ ಆರೋಪ ಕುರಿತು ಮಾತನಾಡಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಖರ್ಗೆ ಕುಟುಂಬ ನೇತೃತ್ವದ “ಸಿದ್ಧಾರ್ಥ ವಿಹಾರ ಟ್ರಸ್ಟ್” ವಿರುದ್ಧ ಕೇಳಿಬಂದಿರುವ ಭೂ ಕಬಳಿಕೆ ಆರೋಪದ ಬಗ್ಗೆ ಇನ್ನೂವರೆಗೂ ಮಾತನಾಡದ ಮಲ್ಲಿಕಾರ್ಜು ಖರ್ಗೆ ಅವರು ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ಮಾಡಿದ್ದನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿದೆ. ಖರ್ಗೆ ಕುಟುಂಬ ನೇತೃತ್ವದ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಮಂಜೂರಾಗಿದ್ದ 5 ಎಕರೆ ಭೂಮಿಯನ್ನು ಸದ್ದಿಲ್ಲದೆ ಕೆಐಎಡಿಬಿ ವಾಪಸ್ ಮಾಡುವ ಮೂಲಕ ಪರೋಕ್ಷವಾಗಿ ತಪ್ಪಿತಸ್ಥರೆಂದು ಒಪ್ಪಿಕೊಂಡಿದ್ದಾರೆಂದು ಹೇಳಿದ್ದಾರೆ.
ಕರ್ನಾಟಕ ಕಾಂಗ್ರೆಸ್ನಲ್ಲಿ ಮೂಡಿದ ಬಿರುಕಿಗೆ ತೇಪೆ ಹಚ್ಚುವ ಭರದಲ್ಲಿ ಮಲ್ಲಿಕಾರ್ಜುನ್ ಖರ್ಗೆಯವರು ಗ್ಯಾರಂಟಿಯಿಂದ ಆಗುವ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಅಪರೂಪಕ್ಕೆ ಸತ್ಯವನ್ನು ಹೇಳಿದ್ದಾರೆ. ತೇಪೆ ಹಚ್ಚಲು ಹೋಗಿ ಪಕ್ಷಕ್ಕೆ ಇನ್ನಷ್ಟು ಹಾನಿಯುಂಟು ಮಾಡಿದ್ದಾರೆಂಬುದನ್ನು ಮಲ್ಲಿಕಾರ್ಜುನ್ ಖರ್ಗೆ ಅವರು ಅರಿತುಕೊಂಡಿರಬೇಕು. ಇದನ್ನು ಮರೆಮಾಚಲು ಇದೀಗ ಪ್ರಧಾನಿ ಮೋದಿಯವರ ವಿರುದ್ಧ ಮಾತನಾಡಿದ್ದಾರೆ. ಆದರೆ, ಗ್ಯಾರಂಟಿಯಿಂದ ಆಗುತ್ತಿರುವ ಹಾನಿ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಾಮಾಣಿಕವಾಗಿ ಒಪ್ಪಿಕೊಂಡಿದನ್ನು ಮತ್ತು ಕರ್ನಾಟಕದ ಈ ಸ್ಥಿತಿಗೆ ಕನ್ನಡಿ ಹಿಡಿದಿರುವ ಖರ್ಗೆಜಿಯವರ ಪ್ರಾಮಾಣಿಕತೆಯನ್ನು ನಾನು ಪ್ರಶಂಸಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕರುಗಳಾದ ಆರ್ ಸುರ್ಜೆವಾಲಾ ಮತ್ತು ಕೆ ಸಿ ವೇಣುಗೋಪಾಲ್ ಅವರು ಹರ್ಯಾಣ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರ ಬೆಂಬಲಕ್ಕೆ ನಿಂತು, ಪ್ರಧಾನಿ ಅವರನ್ನು ಕಟುವಾಗಿ ಟೀಕಿಸಿದ್ದರು. ಆದರೆ, ಈ ನಾಯಕರು ಖರ್ಗೆ ಅವರ ಕುಟುಂಬದ ನೇತೃತ್ವದ ಟ್ರಸ್ಟ್ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಆಪ್ತರ ವಿರುದ್ಧ ಕೇಳಿಬಂದಿರುವ ಭೂಕಬಳಿಕೆ ಆರೋಪದ ಬಗ್ಗೆ ಪ್ರಶ್ನಿಸಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
Advertisement