ಬೆಂಗಳೂರು: ಕಾಫಿ ಕುಡಿಯುವ ಅಭ್ಯಾಸ ಯಾರಿಗೆ ತಾನೇ ಇಲ್ಲ ಹೇಳಿ. ಆದರೆ, ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತಿದೆ. ಕಾಫಿ ಕೂಡ ದೀರ್ಘಕಾಲಿಕ ರೋಗಗಳನ್ನು ತಂದೊಡ್ಡುವ ಸಾಧ್ಯತೆಗಳಿದ್ದು. ಎಚ್ಚರವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಅತಿಯಾದ ಕಾಫಿ ಸೇವನೆಯು ಅಧಿಕ ರಕ್ತದೊತ್ತಡ ಹಾಗೂ ಆತಂಕ (Anxiety) ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
ಆತಂಕ (Anxiety) ಸಮಸ್ಯೆಯೊಂದಿಗೆ ಆಸ್ಪತ್ರೆಗೆ ಬರುವ ಸಾಕಷ್ಟು ರೋಗಿಗಳು ಸಾಮಾನ್ಯವಾಗಿ ಅತಿಯಾದ ಕಾಫಿ ಸೇವನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಏಕೆಂದರೆ ಕೆಲಸ ಸಮಯದಲ್ಲಿ ಕಾಫಿ ಸುಲಭವಾಗಿ ಲಭ್ಯವಿರುವ ಕಾರಣ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಆದರೆ, ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದ್ದರೂ ಗಮನ ಹರಿಸುವುದಿಲ್ಲ.
ನಮ್ಮಲ್ಲಿ ಅನೇಕರು ಕೆಲಸ ಒತ್ತಡ ದೂರಾಗಿಸಲು ಅತಿಯಾಗಿ ಕಾಫಿ ಸೇವನೆ ಮಾಡುವುದುಂಟು. ಆದರೆ, ಇದು ಸಮಸ್ಯೆಯನ್ನು ಉಲ್ಭಣಿಸುತ್ತದೆ ಎಂಬ ಅರಿವು ಅವರಿಗಿರುವುದಿಲ್ಲ. ಅತಿಯಾದ ಕಾಫಿ ಸೇವನೆ ರಕ್ತದೊತ್ತಡವನ್ನು ಹಾಗೂ ಆತಂಕದ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಜನರಲ್ ಹಾಸ್ಪಿಟಲ್ ಸೈಕಿಯಾಟ್ರಿಯಲ್ಲಿನ ಅಧ್ಯಯನಗಳಲ್ಲಿ ಒಂದಾಗಿರುವ ಮಾಸಿಕ ಆರೋಗ್ಯ ಜರ್ನಲ್ ಈ ಕುರಿತು ಅಧ್ಯಯನ ನಡೆಸಿದ್ದು, ಅಧ್ಯಯನದಲ್ಲಿ ಅತಿಯಾದ ಕೆಫೀನ್ ಸೇವನೆಯು ಆತಂಕ (Anxiety) ಹದಗೆಡುವಂತೆ ಮಾಡುತ್ತದೆ ಎಂದು ತಿಳಿದುಬಂದಿದೆ.
ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿನ ಮತ್ತೊಂದು ಸಂಶೋಧನೆಯು ಅಧಿಕ ಕೆಫೀನ್ ಸೇವನೆಯನ್ನು ರಕ್ತದೊತ್ತಡ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದು ಹೃದಯರಕ್ತನಾಳದ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ.
ಪ್ರತಿನಿತ್ಯ ಮೂರು-ನಾಲ್ಕು ಕಪ್‌ಗಳು ಅಥವಾ 400 ಮಿಗ್ರಾಂ ಕೆಫೀನ್ ಅನ್ನು ಸೇವಿಸುವುದು ಸುರಕ್ಷಿತವೆಂದು ಹೇಳಲಾಗುತ್ತದೆ. ಆದರೆ, ಅದಕ್ಕಿಂತೂ ಹೆಚ್ಚು ಸೇವನೆ ಅಪಾಯಕಾರಿ ಎಂದು ವೈದ್ಯರು ತಿಳಿಸಿದ್ದಾರೆ.
ಮುಖ್ಯವಾಗಿ ಗರ್ಭಿಣಿಯರು ಜಾಗರೂಕರಾಗಿರಬೇಕು ಏಕೆಂದರೆ ಅತಿಯಾದ ಕೆಫೀನ್ ಸೇವನೆ ಗರ್ಭಪಾತ ಮತ್ತು ಕಡಿಮೆ ತೂಕದ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಕಾಫಿ ಸೇವನೆಯು ನೇರವಾಗಿ ಸಕ್ಕರೆಯ ಬಳಕೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಆಸ್ಟರ್ ಸಿಎಂಐ ಆಸ್ಪತ್ರೆಯ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ವಿಭಾಗದ ಮುಖ್ಯಸ್ಥ ಎಡ್ವಿನಾ ರಾಜ್ ಅವರು ಮಾತನಾಡಿ, ಅತಿಯಾದ ಕಾಫಿ ಸೇವನೆಯು ಹೆಚ್ಚಿದ ರಕ್ತದೊತ್ತಡ ಸೇರಿದಂತೆ ವಿವಿಧ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಇದು ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ ಮತ್ತು ಕಬ್ಬಿಣಾಂಳ ಕೊರತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.
ಅತಿಯಾದ ಕಾಫಿ ಸೇವನೆಯು ಆಸ್ಟಿಯೊಪೊರೋಸಿಸ್ (ದುರ್ಬಲ ಮೂಳೆಗಳು) ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಇದಲ್ಲದೆ, ತಲೆನೋವು, ಆಯಾಸ, ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಉಂಟು ಮಾಡಬಹುದು. ಕಾಫಿ ಜೊತೆಗೆ ಸಕ್ಕರೆ ಸೇವನೆ ಕೂಡ ಹೆಚ್ಚಾಗುವುದರಿಂದ ಆಗಾಗ್ಗೆ ಮೂತ್ರ ವಿಸರ್ಜನೆ, ಅನಿಯಮಿತ ಹೃದಯ ಬಡಿತ, ಕಿರಿಕಿರಿ ಮತ್ತು ಆತಂಕಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಫೋರ್ಟಿಸ್ ಆಸ್ಪತ್ರೆಯ ಆಂತರಿಕ ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರ ಡಾ.ಅನಂತ ಪದ್ಮನಾಭ ಅವರು ಮಾತನಾಡಿ, ಕಾಫಿ ಸೇವನೆಯು ಸಾಮಾನ್ಯ ಅಭ್ಯಾಸ. ಆದರೆ, ಯಾವುದೂ ಅತಿಯಾಗಬಾರದು. ಕೆಲಸದ ಒತ್ತಡ ನಿರ್ವಹಿಸಲು ಸಾಕಷ್ಟು ಜನರು ಹಲವು ಬಾರಿ ಕಾಫಿ ಸೇವನೆ ಮಾಡುವುದುಂಟು. ಅತಿಯಾದ ಕೆಫೀನ್ ಸೇವನೆಯು ನಿದ್ರಾಹೀನತೆ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಆಸಿಡ್ ರಿಫ್ಲಕ್ಸ್'ನಂತಹ ಜೀರ್ಣ ಸಮಸ್ಯೆಗಳನ್ನು ಪ್ರಚೋದಿಸುತ್ತದೆ ಎಂದು ಹೇಳಿದ್ದಾರೆ.
Advertisement