ಉಡುಪಿ: ರಾಜ್ಯದಾದ್ಯಂತ ರೈತರ ಜಮೀನು, ದೇವಾಲಯಗಳ ಭೂಮಿಯ ಪಹಣಿಗಳಲ್ಲಿ ವಕ್ಫ್ ಮಂಡಳಿಯ ಹೆಸರು ಪತ್ತೆಯಾಗಿರುವ ವಿವಾದ ಭುಗಿಲೆದ್ದಿರುವ ನಡುವಲ್ಲೇ ಉಡುಪಿ ನಗರದಲ್ಲಿ ಇದುವರೆಗೂ ಕೇಳದೆ ಇರುವ ಊರಿನ ಹೆಸರೊಂದು ಸರ್ಕಾರದ ದಿಶಾಂಕ್ ಆ್ಯಪ್ ನಲ್ಲಿ ಕಾಣಿಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸರ್ವೇ ನಂಬರ್ ಗಳನ್ನು ದಾಖಲಿಸುವ ರಾಜ್ಯ ಸರ್ಕಾರದ ದಿಶಾಂಕ್ ಆ್ಯಪ್ ನಲ್ಲಿ ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದ ಸರ್ವೆ ನಂಬರ್ 120 ರಲ್ಲಿ ‘ಸುಲ್ತಾನಪುರ’ ಎಂಬ ಹೆಸರು ಪತ್ತೆಯಾಗಿದೆ. ಆದ್ದರಿಂದ ಜಿಲ್ಲೆಯ ಜನರು ತಮ್ಮ ಪಹಣಿಗಳನ್ನು ಪರೀಕ್ಷಿಸಿ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸಂದೇಶ ವೈರಲ್ ಆಗಿದೆ.
ಉಡುಪಿಯ ನಿವಾಸಿ ರವಿರಾಜ ವಿ ಆಚಾರ್ಯ ಅವರು ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಶ್ರೀಕೃಷ್ಣ ಮಠ ಮತ್ತು ಕಾರ್ ಸ್ಟ್ರೀಟ್ ಸೇರಿದಂತೆ ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮವನ್ನು ಆ್ಯಪ್‌ನಲ್ಲಿ ಸುಲ್ತಾನಪುರ ಎಂದು ನಮೂದಿಸಲಾಗಿದೆ. ಹೀಗಾಗಿ ಉಡುಪಿಯ ಎಲ್ಲಾ ನಾಗರಿಕರು ತಮ್ಮ ಪಹಣಿಗಳನ್ನು ಪರಿಶೀಲಿಸಿ ಎಂದು ಸಲಹೆ ನೀಡಿದ್ದಾರೆ.
ಮತ್ತೊಬ್ಬ ನಿವಾಸಿ ಗಣೇಶಪ್ರಸಾದ್ ಕೋಡಿಬೆಟ್ಟು ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಆ್ಯಪ್ ನಲ್ಲಿ ಉಡುಪಿಯಲ್ಲಿ ‘ಸುಲ್ತಾನ್‌ಪುರ’ ಇರುವುದು ಕಂಡು ಬಂದಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಈ ಸಂದೇಶ ವೈರಲ್ ಆಗುತ್ತಿದ್ದಂತೆಯೇ ಉಡುಪಿ ಜನರು ತಮ್ಮ ಜಮೀನಿನ ದಾಖಲೆ ಹಾಗೂ ಸರಕಾರಿ ದಾಖಲೆಗಳನ್ನು ಪರಿಶೀಲಿಸಲು ಮುಂದಾಗಿದ್ದಾರೆ.
'ಸುಲ್ತಾನ್‌ಪುರ' ಹೊರತುಪಡಿಸಿ, ಆ್ಯಪ್‌ನಲ್ಲಿ ಸೊಟ್ನಟ್ಟಿ ಮತ್ತು ನೆವುಲಾರು ಮುಂತಾದ ಪ್ರದೇಶಕ್ಕೆ ಸಂಬಂಧಿಸದ ಹಲವಾರು ಇತರೆ ಹೆಸರುಗಳೂ ಕಂಡು ಬಂದಿದೆ. ಈ ಕುರಿತು ಚರ್ಚೆಗಳೂ ಕೂಡ ಆರಂಭವಾಗಿವೆ.
ಗೊಂದಲ ಶುರುವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿಗಳು, “Dishank app ನಲ್ಲಿ ಉಡುಪಿ ತಾಲ್ಲೂಕು ಶಿವಳ್ಳಿ ಗ್ರಾಮದ ಸರ್ವೆ ನಂಬರ್ 120 ಮತ್ತು 85 ರಲ್ಲಿ ಸುಲ್ತಾನ್ ಪುರ ಎಂದು ದಾಖಲಾಗಿರುತ್ತದೆ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದನ್ನು ಗಮನಿಸಿದ್ದೇವೆ. ಶಿವಳ್ಳಿ ಗ್ರಾಮದ ಸರ್ವೆ ನಂಬರ್ 120& 85 ರ ಗ್ರಾಮನಕಾಶೆಯನ್ನು ಲಗತ್ತಿಸಲಾಗಿದೆ. ಸಾರ್ವಜನಿಕರು ಸಹ ಸದರಿ ಗ್ರಾಮದ ಪೂರ್ಣ ಗ್ರಾಮ ನಕಾಶೆಯನ್ನು https://www. landrecords. karnataka.gov.in/service3/ Default.aspx ನಲ್ಲಿ Download ಮಾಡಬಹುದಾಗಿದೆ. ಗ್ರಾಮ ನಕಾಶೆಯಲ್ಲಿ ಸುಲ್ತಾನ್ ಪುರ ಎಂದು ದಾಖಲಾಗಿರುವುದಿಲ್ಲ. ಕಂದಾಯ/ಭೂಮಾಪನ ಇಲಾಖೆ ದಾಖಲೆಗಳಲ್ಲಿ ಸುಲ್ತಾನ್ ಪುರ ಎಂದು ಇಲ್ಲ, ಸರ್ವೇ ನಂಬರ್ 120ರ RTC ಯಲ್ಲೂ ಈ ರೀತಿಯ ಯಾವುದೇ ಉಲ್ಲೇಖವಿಲ್ಲ. ಆದ್ದರಿಂದ ಸಾರ್ವಜನಿಕರು ಯಾವುದೇ ಆತಂಕಪಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement