ಬೆಂಗಳೂರು: ಕ್ಷಯರೋಗವು ದೇಶದಲ್ಲಿ ಇಂದಿಗೂ ಆರೋಗ್ಯ ಸವಾಲಾಗಿ ಉಳಿದಿದೆ. ಪ್ರಥಮ ಹಂತದ ಕ್ಷಯರೋಗ ನಿವಾರಕ ಔಷಧಿಗಳ ನಿರಂತರ ಪೂರೈಕೆಯನ್ನು ನೋಡಿಕೊಳ್ಳಲು ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಇತ್ತೀಚೆಗೆ ಚರ್ಚೆ ನಡೆಸಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (WHO) 2024 ರ ಜಾಗತಿಕ ಟಿಬಿ ವರದಿಯನ್ನು ಬಿಡುಗಡೆ ಮಾಡಿದ ನಂತರ ಅವರು ಮಾತನಾಡುತ್ತಿದ್ದರು, ಕ್ಷಯರೋಗವನ್ನು ನಿಭಾಯಿಸುವಲ್ಲಿ ಭಾರತ ಪ್ರಗತಿ ಕಾಣುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಛೆ ಹೇಳಿದರೂ ಕೂಡ ಇನ್ನೂ ಬಹಳ ದೂರ ಸಾಗಬೇಕಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಹೆಚ್ಚಿನ ಟಿಬಿ ಪ್ರಕರಣಗಳು ದಾಖಲಾಗಿವೆ. ಟಿಬಿ ಕಾಯಿಲೆ ಮತ್ತು ಮರಣದಲ್ಲಿ ಕ್ರಮೇಣ ಇಳಿಮುಖವಾಗಿದೆ, ವಿಸ್ತೃತ ರೋಗನಿರ್ಣಯ ಸೇವೆಗಳು ಮತ್ತು ಚಿಕಿತ್ಸೆಗೆ ಸುಧಾರಿತ ಬೆಂಬಲ ನೀಡಲಾಗುತ್ತಿದೆ ಎಂದರು.
ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ, 2023 ರಲ್ಲಿ, ಭಾರತವು ಸುಮಾರು 2.7 ಮಿಲಿಯನ್ ಟಿಬಿ ಪ್ರಕರಣಗಳನ್ನು ಹೊಂದಿತ್ತು, 2.51 ಮಿಲಿಯನ್ ಜನರಲ್ಲಿ ರೋಗನಿರ್ಣಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು 2015 ರಲ್ಲಿ ಶೇಕಡಾ 72ರಿಂದ 2023 ರಲ್ಲಿ ದೇಶದ ಚಿಕಿತ್ಸಾ ವ್ಯಾಪ್ತಿಯನ್ನು ಶೇಕಡಾ 89ಕ್ಕೆ ಹೆಚ್ಚಿಸಿದೆ.
2015 ರಲ್ಲಿ 100,000 ಜನರಿಗೆ 237 ಪ್ರಕರಣಗಳಿಂದ 2023 ರಲ್ಲಿ 100,000 ಜನರಿಗೆ 195 ಪ್ರಕರಣಗಳಿಗೆ ಭಾರತದಲ್ಲಿ ಕ್ಷಯರೋಗ ಪ್ರಕರಣ ಇಳಿಕೆಯಾಗಿದೆ, ಅಂದರೆ ಶೇಕಡಾ 17.7ರಷ್ಟು ಇಳಿಕೆಯಾಗಿದ್ದು, ಜಾಗತಿಕ ಇಳಿಕೆಯ ಶೇಕಡಾ 8.3 ಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.
ಕ್ಷಯ ಪ್ರಕರಣಗಳ ಪತ್ತೆಗೆ ಭಾರತವು ನಿರ್ಮಿಸಿರುವ ಪತ್ತೆಹಚ್ಚುವಿಕೆ ಮತ್ತು ಆರೋಗ್ಯ ಸೇವೆಗಳಿಗೆ ದೇಶಾದ್ಯಂತ 1,70,000 ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರವು 800 ಕ್ಕೂ ಹೆಚ್ಚು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಕ್ರಿಯಗೊಳಿಸಿದ ಪೋರ್ಟಬಲ್ ಎದೆಯ ಎಕ್ಸ್-ರೇ ಯಂತ್ರಗಳನ್ನು ಟಿಬಿ ಪ್ರಯೋಗಾಲಯ ಜಾಲವನ್ನು ವರ್ಧಿಸಲು ಹೊಂದಿದ್ದು, ಇದು ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಈ ಜಾಲವು ದೇಶಾದ್ಯಂತ 7,767 ಕ್ಷಿಪ್ರ ಆಣ್ವಿಕ ಪರೀಕ್ಷಾ ಸೌಲಭ್ಯಗಳನ್ನು ಮತ್ತು 87 ಕಲ್ಚರ್ ಮತ್ತು ಔಷಧದ ಸೂಕ್ಷ್ಮತೆಯ ಪರೀಕ್ಷಾ ಪ್ರಯೋಗಾಲಯಗಳನ್ನು ಒಳಗೊಂಡಿದೆ.
Advertisement