ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮೈಸೂರಿನಲ್ಲಿ ಲೋಕಾಯುಕ್ತ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ನಾನು ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹೋಗುತ್ತಿದ್ದೇನೆ ಎಂದು ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಎ1 ಆರೋಪಿಯಾಗಿರುವ ಸಿಎಂ ಸಿದ್ದರಾಂಯ್ಯನ ಅವರಿಗೆ ಲೋಕಾಯುಕ್ತ ಪೊಲೀಸರು ಸೋಮವಾರ ನೋಟಿಸ್ ಜಾರಿ ಮಾಡಿದ್ದಾರೆ.
ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ನವೆಂಬರ್ 6ರಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ನೀಡಲಾಗಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಪ್ರಕರಣವೊಂದರ ಆರೋಪಿಯಾಗಿ ವಿಚಾರಣೆ ಎದುರಿಸಬೇಕಾಗಿ ಬಂದಿದೆ.
ಪ್ರಕರಣ ಸಂಬಂಧ ಈಗಾಗಲೇ ಲೋಕಾಯುಕ್ತ ಎಲ್ಲಾ ಆರೋಪಿಗಳ ವಿಚಾರಣೆ ಮುಗಿಸಿದ್ದು, ಸಿದ್ದರಾಮಯ್ಯನವರ ವಿಚಾರಣೆಯೊಂದೇ ಬಾಕಿ ಇತ್ತು. ಇದೀಗ ಎ1 ಆರೋಪಿಗೂ ಸಹ ಲೋಕಾಯುಕ್ತ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಸಿದ್ದರಾಮಯ್ಯ ಅವರ ನಾಳಿನ ಪ್ರವಾಸ ಪಟ್ಟಿ ಹೀಗಿದೆ
ಸಿಎಂ ಸಿದ್ದರಾಮಯ್ಯ ಅವರು ನಾಳೆ ಬೆಳಗ್ಗೆ 7.30ಕ್ಕೆ ಬೆಂಗಳೂರಿಂದ ರಸ್ತೆ ಮೂಲಕ ಮೈಸೂರಿಗೆ ಪ್ರಯಾಣ ಬೆಳಸಲಿದ್ದು, ಮಧ್ಯಾಹ್ನ 12 ಗಂಟೆವರೆಗೆ ಸಮಯ ಮೀಸಲಿರಿಸಿದ್ದಾರೆ. 12 ಗಂಟೆ ನಂತರ ಮೈಸೂರಿನಿಂದ ರಸ್ತೆ ಮೂಲಕ ಚನ್ನಪಟ್ಟಣಕ್ಕೆ ಪ್ರಯಾಣ ಬೆಳಸಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಚನ್ನಪಟ್ಟಣದ ಬೇವೂರು ಗ್ರಾಮಕ್ಕೆ ತೆರಳಲಿದ್ದಾರೆ. ಅಲ್ಲಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಹಳ್ಳಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ರಾತ್ರಿ 9 ಗಂಟೆಯವರೆಗೂ ಚನ್ನಪಟ್ಟಣದಲ್ಲೇ ಇರಲಿರುವ ಸಿಎಂ ಸಿದ್ದರಾಮಯ್ಯ, 9 ಗಂಟೆಗೆ ಚನ್ನಪಟ್ಟಣದಿಂದ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
Advertisement