ಬೆಂಗಳೂರು: ಮುಡಾ ಹಗರಣ (MUDA scam)ಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿಎಂ ಪಾರ್ವತಿ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಮಾತ್ರವಲ್ಲದೇ ಅವರ ಭಾವ ಮಲ್ಲಿಕಾರ್ಜುನ ಸ್ವಾಮಿ, ಕೇಂದ್ರ ಸರ್ಕಾರ, ಕೇಂದ್ರ ತನಿಖಾ ದಳ (ಸಿಬಿಐ), ರಾಜ್ಯ ಸರ್ಕಾರ, ರಾಜ್ಯ ಪೊಲೀಸ್ ಮುಖ್ಯಸ್ಥರು, ಲೋಕಾಯುಕ್ತ ಪೊಲೀಸರು ಮತ್ತು ಇತರರಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದ ಸ್ವತಂತ್ರ, ನ್ಯಾಯಸಮ್ಮತ, ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಲೋಕಾಯುಕ್ತ ಪೊಲೀಸರಿಂದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ನಿರ್ದೇಶನ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಹೈಕೋರ್ಟ್ ಈ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.
ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಬಿಎಂ ಅವರಿಗೆ ಮುಡಾದಿಂದ 14 ಪರಿಹಾರ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಹಾಗೂ ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ನೋಟಿಸ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಎಲ್ಲ ಪ್ರತಿವಾದಿಗಳಿಗೆ ಸೂಚಿಸಿದ ನ್ಯಾಯಾಲಯ, ಮುಂದಿನ ವಿಚಾರಣೆಯ ದಿನಾಂಕವಾದ ನವೆಂಬರ್ 26 ರೊಳಗೆ ತನಿಖೆಯ ವಿವರಗಳನ್ನು ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದೆ.
ಮುಖ್ಯಮಂತ್ರಿಗಳು ರಾಜ್ಯದ ಇಲಾಖೆಗಳ ಮೇಲೆ, ವಿಶೇಷವಾಗಿ ರಾಜ್ಯದ ತನಿಖಾ ಸಂಸ್ಥೆಗಳಾದ ಪೊಲೀಸ್ ಅಧಿಕಾರಿಗಳು ಮತ್ತು ಲೋಕಾಯುಕ್ತ ಪೊಲೀಸರ ಮೇಲೆ ಅಪಾರ ಅಧಿಕಾರ ಮತ್ತು ಪ್ರಭಾವ ಬೀರಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಹೀಗಿರುವಾಗ, ಮುಖ್ಯಮಂತ್ರಿ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಎರಡೂ ಸಂಸ್ಥೆಗಳು ಕೈಗೊಂಡ ಯಾವುದೇ ತನಿಖೆ ನಿಷ್ಪಕ್ಷಪಾತ ತನಿಖೆಯಾಗುವುದಿಲ್ಲ. ತನಿಖಾಧಿಕಾರಿಗಳ ಮೇಲೆ ಅಂತಹ ಪ್ರಭಾವ ಬೀರಿದಾಗ, ತನಿಖೆಯ ಫಲಿತಾಂಶವು ನ್ಯಾಯಯುತ ಮತ್ತು ನಿಷ್ಪಕ್ಷಪಾತವಾದ ಫಲಿತಾಂಶವಾಗುವುದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅರ್ಜಿದಾರ ಸ್ನೇಹಮಯಿ ಕೃಷ್ಣ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಸ್ನೇಹಮಯಿ ಕೃಷ್ಣ ಅವರ ದೂರಿನ ಅನ್ವಯ ಹಾಲಿ ಹಾಗೂ ಮಾಜಿ ಸಂಸದರು/ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು ಐಪಿಸಿ, ಭ್ರಷ್ಟಾಚಾರ ತಡೆ ಕಾಯ್ದೆ, ಬೇನಾಮಿ ಆಸ್ತಿ ವಹಿವಾಟು ತಡೆ ಕಾಯ್ದೆ ಹಾಗೂ ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ. ಮೂರು ತಿಂಗಳೊಳಗೆ ಕ್ರಮವಹಿಸಿ ವರದಿ ಸಲ್ಲಿಸಬೇಕು ಎಂದು ಹೇಳಿದೆ.
ರಾಜ್ಯಪಾಲರು ನೀಡಿದ ಅನುಮೋದನೆ ವಿರುದ್ಧ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್ ಇತ್ತೀಚೆಗೆ ನೀಡಿರುವ ಆದೇಶದಲ್ಲಿ ಉಲ್ಲೇಖಿಸಿರುವಂತೆ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಸೇರಿದಂತೆ ಆರೋಪಿಗಳ ವಿರುದ್ಧದ ಪ್ರಾಥಮಿಕ ಪ್ರಕರಣವನ್ನು ಪರಿಗಣಿಸಿ ಸಿಬಿಐ ಅಥವಾ ಇತರ ಯಾವುದೇ ಸಂಸ್ಥೆಯಿಂದ ತನಿಖೆ ಅನಿವಾರ್ಯವಾಗಿದೆ.
ಈ ಪ್ರಕರಣದಲ್ಲಿ ಇಡೀ ರಾಜಕೀಯ ಪಕ್ಷ, ಅವರ ಪಕ್ಷದ ಹೈಕಮಾಂಡ್, ರಾಜ್ಯ ಸರ್ಕಾರ, ಸಚಿವ ಸಂಪುಟ ಮತ್ತು ಇಡೀ ವ್ಯವಸ್ಥೆ ನನಗೆ ಬೆಂಬಲ ನೀಡುತ್ತಿದೆ ಎಂದು ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಬಹಿರಂಗವಾಗಿ ಹಲವಾರು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
Advertisement