ಬೀದರ್: ಜಾತ್ರೆಯಲ್ಲಿ ಭಾಗವಹಿಸಿದ್ದರು ಎಂಬ ಕಾರಣಕಕ್ಕೆ ಪರಿಶಿಷ್ಟ ಪಂಗಡದವರ ಮೇಲೆ ಸವರ್ಣೀಯರು ಹಲ್ಲೆ ನಡೆಸಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ಎಂಬ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಕಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದ್ದು, 73 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಭಾನುವಾರ (ನ.3) ಹನುಮಾನ ದೇವರ ಜಾತ್ರಾ ಮಹೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಘಟನೆ ನಡೆದಿದೆ. ಹಲ್ಲೆಗೊಳಗಾದವರ ಜೊತೆಗೆ ಪರಿಶಿಷ್ಟ ಜನಾಂಗದವರು ಸೋಮವಾರ (ನ.4) ಖಟಕಚಿಂಚೋಳಿ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.
ಇದರ ಬೆನ್ನಲ್ಲೇ ಲಿಂಗಾಯತ ಸಮುದಾಯದ 73 ಜನರ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಈ ಪೈಕಿ 15 ಜನರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ನವೆಂಬರ್ 3 ರಂದು ಸಂಜೆ 7.45ಕ್ಕೆ ಚಳಕಾಪುರ ಗ್ರಾಮದಲ್ಲಿ ಸವರ್ಣೀಯರು ದಲಿತರ ಕಾಲೋನಿಗಳಿಗೆ ನುಗ್ಗಿದ್ದು, ಈ ವೇಳೆ ಜಾತಿ ನಿಂದನೆ ಮಾಡಿ, ಮಹಿಳೆಯರು, ಮಕ್ಕಳು ಹಾಗೂ ವೃದ್ಧರನ್ನು ಮನಬಂದಂತೆ ಥಳಿಸಿದರು ಎಂದು ಧನರಾಜ್ ದೊಡ್ಡಮನಿ ಎಂಬುವವರು ದೂರಿನಲ್ಲಿ ಆರೋಪಿಸಿದ್ದಾರೆ.
ನಮ್ಮ ಮನೆಗಳಿಗೆ ನುಗ್ಗಿದ ಸವರ್ಣೀಯರು ಜಾತಿನಿಂದನೆ ಮಾಡಿ, ಗ್ರಾಮಕ್ಕೆ ಬರದಂತೆ ನಿರ್ಬಂಧ ವಿಧಿಸಿದರು. ಅಲ್ಲದೆ ಎಲ್ಲಾ ದಿನಸಿ ಅಂಗಡಿಗಳನ್ನ ಬಂದ್ ಮಾಡುವುದಾಗಿಯೂ ಬೆದರಿಕೆ ಹಾಕಿದರು. ನಮ್ಮ ಮೇಲೆ ದಾಳಿ ನಡೆಸಿದವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅಲ್ಲದೆ, ದೂರಿನಲ್ಲಿ ತಮ್ಮ ಮೇಲೆ ದಾಳಿ ನಡೆಸಿದವರ ಹೆಸರನ್ನೂ ದೂರಿನಲ್ಲಿ ಧನರಾಜ್ ಅವರು ಉಲ್ಲೇಖಿಸಿದ್ದಾರೆ.
ಕೈಲಾಸ ಮಸಲ್ದಾರ್, ರಾಜಕುಮಾರ ಮಸಲ್ದಾರ್, ಲೋಕೇಶ್ ಮಸಲ್ದಾರ್, ಪ್ರಶಾಂತ ಕಣಜಿಕರ್, ಪ್ರದೀಪ್ ಕಣಜಿಕರ್, ಮಂಜುನಾಥ ಪಾಟೀಲ್, ಸುನೀಲ್ ಹೆಳವ, ಲೋಕೇಶ್ ಕಣಜಿಕರ್, ನಿಕಿಲ್ ಹುಲ್ಲೇಪ್ಪನವರ, ಶಿವಪ್ಪನವರ್ ರೊಟ್ಟೆ, ಸಂತೋಷ ಹೆಳವ, ಕಿರಣ್ ರುದ್ರಪ್ಪನವರ್, ಬಸವಕಿರಣ ಮನಕೋಜಿ, ಪವನ್ ರುಯಿದ್ರಪ್ಪನವರ್, ಸಾಗರ್ ಕೋರೆ, ಸುರೇಶ ಜಮಾದಾರ್, ಅನಿಲ್ ಉಪ್ಪಾರ್, ಮಲ್ಲಿಕಾರ್ಜುನ ಕೋಲಾರೆ, ವಿಕಾಶ ಹುಗ್ಗೇಗೌಡ, ಪ್ರವೀಣ ಸೋಂಕೆರೆ ಹಾಗೂ ಹುನುಮಾನ ಜಾತ್ರಾ ಮಹೋತ್ಸವ ಸಮಿತಿಯ ಸರ್ವ ಸದಸ್ಯರು, ಮೆರವಣಿಗೆಯ ಪದಾಧಿಕಾರಿಗಳು ಸೇರಿ ಒಟ್ಟು 73 ಮಂದಿಯ ಹೆಸರನ್ನು ಉಲ್ಲೇಖಿಸಿದ್ದಾರೆ.
ಇನ್ನು ಘಟನೆ ಬೆನ್ನಲ್ಲೇ ನ.3ರಂದು ರಾತ್ರಿ ಚಳಕಾಪುರ ಗ್ರಾಮಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದರು ಎಂದು ತಿಳಿದಬಂದಿದೆ.
Advertisement