ಹಾವೇರಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕರ್ನಾಟಕದಿಂದಲೂ ಬೆದರಿಕೆ ಸಂದೇಶ ಕಳುಹಿಸಲಾಗುತ್ತಿದೆ. ಹೌದು. 5 ಕೋಟಿ ರೂ ಹಣದ ಬೇಡಿಕೆಯೊಂದಿಗೆ ನಟನಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬುಧವಾರ ಹಾವೇರಿಯಲ್ಲಿ ಬಂಧಿಸಿದ್ದಾರೆ.
35 ವರ್ಷದ ಭಿಕರಾಮ್ ಜಲರಾಮ್ ಬಿಷ್ಣೋಯಿ ಬಂಧಿತ ಆರೋಪಿ. ವಿಚಾರಣೆಯ ನಂತರ ಮುಂಬೈನ ವರ್ಲಿ ಪೊಲೀಸ್ ಠಾಣೆಯ ತಂಡ ಬುಧವಾರ ಆರೋಪಿಯನ್ನು ಬಂಧಿಸಿದೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲತಃ ರಾಜಸ್ಥಾನದ ಜಲೋರ್‌ನವರಾಗಿರುವ ಬಿಷ್ಣೋಯಿ ಸೋಮವಾರ ರಾತ್ರಿ ಮುಂಬೈ ಸಂಚಾರ ಪೊಲೀಸರ ಕಂಟ್ರೋಲ್ ರೂಮ್‌ನ ವಾಟ್ಸಾಪ್ ಸಹಾಯವಾಣಿಯಲ್ಲಿ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದ್ದರೆ ಅವರು ನಮ್ಮ ದೇವಸ್ಥಾನಕ್ಕೆ ಹೋಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರೂ. 5 ಕೋಟಿ ಹಣ ನೀಡಬೇಕು. ಹೀಗೆ ಮಾಡದಿದ್ದಲ್ಲಿ ನಟನನ್ನು ಹತ್ಯೆ ಮಾಡಲಾಗುವುದು, ನಮ್ಮ ಗ್ಯಾಂಗ್ ಇನ್ನೂ ಸಕ್ರಿಯವಾಗಿದೆ ಎಂದು ಸಂದೇಶದಲ್ಲಿ ಬರೆಯಲಾಗಿತ್ತು.
ಬಂಧಿತನು ತಾನು ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯಿ ಅವರ ಸಹೋದರ ಎಂದು ಹೇಳಿಕೊಂಡಿದ್ದ. ಆರೋಪಿ ವಿರುದ್ಧ ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಆರೋಪಿ ಕರ್ನಾಟಕದವನು ಎಂದು ತಿಳಿದುಬಂದ ನಂತರ ಆತನನ್ನು ಬಂಧಿಸಲು ವರ್ಲಿ ಪೊಲೀಸರ ತಂಡವನ್ನು ಕಳುಹಿಸಲಾಯಿತು. ಮಂಗಳವಾರ ತಡರಾತ್ರಿ ವಿಚಾರಣೆ ನಂತರ ಬಿಷ್ಣೋಯಿಯನ್ನು ಬಂಧಿಸಲಾಯಿತು ಎಂದು ಅವರು ಹೇಳಿದರು.
Advertisement