ನಿಯಮಗಳ ಗಾಳಿಗೆ ತೂರಿ MUDA ಸಿಬ್ಬಂದಿಯಿಂದ ಕೋಟ್ಯಾಂತರ ರೂಪಾಯಿ ವಂಚನೆ: RTI ಕಾರ್ಯಕರ್ತ ಗಂಗರಾಜು ಆರೋಪ
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ)ನ 50:50 ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಪ್ರಗತಿಯಲ್ಲಿರುವಂತೆಯೇ ಪ್ರಾಧಿಕಾರದಲ್ಲಿ ನಡೆಯುತ್ತಿರು ಮತ್ತೊಂದು ಹಗರಣವನ್ನು ಆರ್‌ಟಿಐ ಕಾರ್ಯಕರ್ತರೊಬ್ಬರು ಬಯಲಿಗೆಳೆದಿದ್ದಾರೆ.
ಮುಡಾದಲ್ಲಿರುವ ಸಿಬ್ಬಂದಿಗಳು ನಕಲಿ ದಾಖಲೆ ಸೃಷ್ಟಿಸಿ, ದಾಖಲೆಗಳನ್ನು ತಿರುಚಿ ಸುಳ್ಳು ಬ್ಯಾಂಕ್ ಚಲನ್‌ಗಳನ್ನು ನೀಡಿ ಗ್ರಾಹಕರ ಹಣವನ್ನು ಕಬಳಿಸಿ ಪ್ರಾಧಿಕಾರಕ್ಕೆ ಭಾರಿ ನಷ್ಟ ಉಂಟು ಮಾಡಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ಆರೋಪಿಸಿದ್ದಾರೆ.
ಈ ಸಂಬಂಧ ಮುಡಾ ಆಯುಕ್ತರಿಗೆ ದೂರು ಸಲ್ಲಿಸಿರುವ ಗಂಗರಾಜು ಅವರು, ಮುಡಾ ಆವರಣದಲ್ಲಿರುವ ಬ್ಯಾಂಕ್‌ನ ಅಧಿಕಾರಿಗಳ ಸಹಯೋಗದಲ್ಲಿ ಕೆಲವು ಮುಡಾ ನೌಕರರು ಮತ್ತು ಹೊರಗುತ್ತಿಗೆ ಸಿಬ್ಬಂದಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಕಲಿ ಚಲನ್‌ಗಳನ್ನು ನೀಡುತ್ತಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷವೇ ಹಗರಣದ ಮೇಲೆ ಬೆಳಕು ಚೆಲ್ಲಲಾಗಿತ್ತು. ಆದರೆ, ಈ ವರೆಗೂ ಯಾವುದೇ ಕ್ರಮವಾಗಿಲ್ಲ. ಹೀಗಾಗಿ ಹಗರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಉಳಿಸಿ ವೇದಿಕೆ’ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ದೂರು ಕುರಿತು ಪ್ರತಿಕ್ರಿಯೆ ನೀಡಿರುವ ಮುಡಾ ಅಧಿಕಾರಿಗಳು ಈ ಬಗ್ಗೆ ಕಳೆದ ವರ್ಷ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.