ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಹಾಗೂ ವಕೀಲ ಜಗದೀಶ್ ಅವರು ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಕೋಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ ಬೆನ್ನು ನೋವಿನ ಕಾರಣದಿಂದಾಗಿ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನು ವಕೀಲ ಜಗದೀಶ್ ಅವರು ಬಿಗ್ಬಾಸ್ 11ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಹೋಗಿ, ಬಿಗ್ ಮನೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಲ್ಲೋಲ ಕಲ್ಲೋಲ ಎಬ್ಬಿಸಿ ಮನೆಯಿಂದ ನೇರವಾಗಿ ಎಲಿಮಿನೇಟ್ ಆಗಿ ಹೊರ ಬಂದಿದ್ದು, ಇದೀಗ ಪ್ರಸ್ತುತ ವಿದ್ಯಾಮಾನಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿ ಬಿಡುತ್ತಿದ್ದಾರೆ. ಈ ನಡುವೆ ನಟ ದರ್ಶನ್ ಅವರ ಪ್ರಕರಣ ಕುರಿತಾಗಿಯೂ ಮಾತನಾಡಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.
ಪ್ರಕರಣದ ಬಗ್ಗೆ ಮಾತನಾಡುವಾಗ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಇದಕ್ಕೆ ದರ್ಶನ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದು, ನಿಂದನಾತ್ಮಕ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಜಗದೀಶ್ ಅವರು ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ದರ್ಶನ್ ಅಭಿಮಾನಿಗಳಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಕಳೆದ 2 ದಿನಗಳಲ್ಲಿ 1,000ಕ್ಕೂ ಹೆಚ್ಚು ಬಾರಿ ಬೆದರಿಕೆ ಕರೆಗಳು ಬಂದಿವೆ. ದರ್ಶನ್ ಅಭಿಮಾನಿ ರಿಷಿ ಎನ್ನುವ ವ್ಯಕ್ತಿ ನನಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಇದೆಲ್ಲದಕ್ಕೂ ಜಾಮೀನಿನ ಮೇಲೆ ಹೊರಬಂದು ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್ ಸೂಚನೆ ಕೊಟ್ಟಿದ್ದಾರೆ. ದರ್ಶನ್ಗೆ ರಾಜ್ಯದಾದ್ಯಂತ ಅಭಿಮಾನಿಗಳಿದ್ದು, ಅವರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ಬೇಕಾಗಿದೆ. ನಮಗೆ ರಕ್ಷಣೆ ಕೊಡುವ ಜೊತೆಗೆ ದರ್ಶನ್ ಹಾಗೂ ರಿಷಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಗದೀಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Advertisement