ಮೈಸೂರು: ಕೇಂದ್ರ ಪ್ರವಾಸೋದ್ಯಮ ಇಲಾಖೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಆಯೋಜಿಸಿದ್ದ ಮೈಸೂರು ಸಂಗೀತ ಸುಗಂಧ ಉತ್ಸವ ಕಾರ್ಯಕ್ರಮವನ್ನು ಕೇಂದ್ರ ವಿತ್ತ ಸಚಿವೆ ಶುಕ್ರವಾರ ಉದ್ಘಾಟಿಸಿದರು.
ಕೇಂದ್ರ ಪ್ರವಾಸೋದ್ಯಮ ಇಲಾಖೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಆಯೋಜಿಸಿದ್ದ ಮೈಸೂರು ಸಂಗೀತ ಸುಗಂಧ ಉತ್ಸವ ಕಾರ್ಯಕ್ರಮದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪಾಲ್ಗೊಂಡಿದ್ದರು.
ಕಾರ್ಯಕ್ರಮ ಉದ್ಧಾಟಿಸಿ ಮಾತನಾಡಿದ ಅವರು, ಕರ್ನಾಟಕ ಸಂಗೀತ ಇಡೀ ದೇಶದಾದ್ಯಂತ ಮನೆ ಮಾತಾಗಿದ್ದು, ಸಂಗೀತ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರವಾದುದು ಎಂದು ಹೇಳಿದರು.
'ಮೈಸೂರು ಸಂಗೀತ ಸುಗಂಧ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಅಪಾರ ಸಂತಸ ತಂದಿದೆ. ದೇಶ ಆರ್ಥಿಕವಾಗಿ ಸದೃಢವಾದರೆ ಇಡೀ ದೇಶ ಎಲ್ಲಾ ರಂಗಗಳಲ್ಲೂ ಸದೃಢವಾಗುತ್ತದೆ. ಕರ್ನಾಟಕ ಸಂಗೀತ ಇಡೀ ದೇಶದಾದ್ಯಂತ ಮನೆ ಮಾತಾಗಿದ್ದು, ಏಕ್ ಭಾರತ್ ಶ್ರೇಷ್ಟ ಭಾರತ್ ಸಾಕಾರಗೊಳ್ಳಲು ಸಂಗೀತ ಪ್ರೇರಣೆಯಾಗಿದೆ. ವಿಭಿನ್ನವಾದ ಭಾಷೆ ಸಂಸ್ಕೃತಿ ಹೊಂದಿದ್ದರೂ ದೇಶ ವಿವಿಧತೆಯಲ್ಲಿ ಏಕತೆಯಿಂದ ಕೂಡಿದೆ. ಕನ್ನಡ ಭಾಷೆ ಭಕ್ತಿ ಸಂಗೀತದ ಮೂಲಕ ಮನ ಮುಟ್ಟುತ್ತದೆ. ಹಲವು ವಿಶೇಷತೆಗಳನ್ನು ಹೊಂದಿರುವ ಮೈಸೂರು ದಾಸ ಸಂಗೀತ ಪರಂಪರೆಯನ್ನು ಹೊಂದಿದೆ. ಪುರಂದರದಾಸರು ಕೀರ್ತನೆಗಳ ಮೂಲಕ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅತ್ಯಮೂಲ್ಯ. ಇದರ ಜೊತೆಗೆ ಕನಕದಾಸ, ವಾದಿರಾಜ ದಾಸ ಮೊದಲಾದವರು ಸಂಗೀತವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ ಎಂದರು.
ಕರ್ನಾಟಕ ಶಾಸ್ತ್ರೀಯ ಸಂಗೀತದ ಮೂಲ ಮೈಸೂರು
ಇದೇ ವೇಳೆ ಭಾರತದ ಸಂಗೀತ ಪರಂಪರೆಗೆ ಕರ್ನಾಟಕ ಸಂಗೀತದ ಕೊಡುಗೆ ಮಹತ್ವವಾಗಿದ್ದು, ಜಾತಿ, ಧರ್ಮ ಹಾಗೂ ಭಾಷೆ ಮೀರಿ ಇಂದು ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದು ಮೈಸೂರಿನ ಕೊಡುಗೆಯನ್ನು ಕೊಂಡಾಡಿದರು. 'ಕರ್ನಾಟಕ ಶಾಸ್ತ್ರೀಯ ಸಂಗೀತದ ಮೂಲ ಮೈಸೂರು ಆಗಿದೆ. ಇಂದು ಸಂಗೀತ ಸುಗಂಧ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸಿರುವ ಮುಖ್ಯ ಉದ್ದೇಶ, ಇಲ್ಲಿನ ವಿಜಯನಗರ ಸಾಮ್ರಾಜ್ಯದಂತಹ ರಾಜ ಮನೆತನಗಳ ಒಡೆಯರು ಸಂಗೀತಕ್ಕೆ ಹಾಗೂ ಅದರ ಬೆಳವಣಿಗೆಗೆ ನೀಡುರುವ ಪ್ರೋತ್ಸಾಹವೇ ಕಾರಣ. ಅಲ್ಲದೇ ಮೈಸೂರು ಸಂಗೀತದ ನಾಡು, ಹಾಗೆಯೇ ಚಂದನದ ನಾಡು ಆಗಿದೆ. ಹಾಗಾಗಿ ಇಂತಹ ಉತ್ತಮ ಕಾರ್ಯಕ್ರಮ ಆಯೋಜಿಸಿ ಆ ಕಾರ್ಯಕ್ರಮದಲ್ಲಿ ದಾಸ ಸಂಗೀತದ ಬಗ್ಗೆ ಮಾತಾಡವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಕ್ರೀಡೆ, ಸಾಹಿತ್ಯ, ಕಲೆ, ಮನೋರಂಜನೆ, ಕೃಷಿ, ಆಹಾರ ವಿವಿಧ ಕಲೆಗಳ ಸಂಯೋಗದೊಂದಿಗೆ 414ನೇ ದಸರಾ ಆಚರಣೆ ನಡೆದಿದ್ದು, ಈ ಬಾರಿ ಉತ್ತಮ ದಸರ ಆಚರಣೆಯಾಗಿದ್ದು, ವೈವಿಧ್ಯತೆಯಲ್ಲಿ ಏಕತೆಯನ್ನು ತೋರಿಸುತ್ತದೆ ಎಂದರು.
12ನೇ ಮತ್ತು 16ನೇ ಶತಮಾನದ ನಡುವೆ, ವಿಜಯನಗರ ಸಾಮ್ರಾಜ್ಯದ ಆಶ್ರಯದಲ್ಲಿ ಕರ್ನಾಟಕ ಸಂಗೀತವು ಪ್ರವರ್ಧಮಾನಕ್ಕೆ ಬಂದಿತು. ಈ ಸಮಯದಲ್ಲಿ "ಕರ್ನಾಟಿಕ್ ಸಂಗೀತದ ಪಿತಾಮಹ" ಎಂದು ಕರೆಯಲ್ಪಡುವ ಸಂತ ಪುರಂದರದಾಸರು ಲಕ್ಷಾಂತರ ಕೀರ್ತನೆಗಳು, ಭಕ್ತಿಗೀತೆಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತದ ಮೂಲಭೂತ ಪಾಠಗಳನ್ನು ಸಹ ರೂಪಿಸಿದ್ದಾರೆ.
18ನೇ ಶತಮಾನವನ್ನು ಕರ್ನಾಟಕ ಸಂಗೀತದ ಸುವರ್ಣಯುಗವೆಂದು ಪರಿಗಣಿಸಬಹುದು. ಪುರಂದರ ದಾಸರ ನಂತರ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರ್ ಮತ್ತು ಶ್ಯಾಮ ಶಾಸ್ತ್ರಿ ಈ ಮೂವರು ಸಂಯೋಜಕರು ಸಮಕಾಲೀನರಾಗಿದ್ದರು. ಅವರ ಸಂಯೋಜನೆಗಳಿಂದ ಕರ್ನಾಟಿಕ್ ಸಂಗೀತ ಸಂಗ್ರಹವನ್ನು ಶ್ರೀಮಂತಗೊಳಿಸಿದರು. ಅವರು ಮಧುರ ಸೌಂದರ್ಯ, ಲಯಬದ್ಧ ಮತ್ತು ಭಕ್ತಿಯ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಕೀರ್ತನೆ ಹಾಡಿದ ಕೇಂದ್ರ ಸಚಿವೆ
ಇದೇ ವೇಳೆ ಪುರಂದರದಾಸರು ಕರ್ನಾಟಕ ಸಂಗೀತದ ಪಿತಾಮಹರಾಗಿದ್ದಾರೆ ಎಂದು ಶ್ಲಾಘಿಸಿದ ನಿರ್ಮಲಾ ಸೀತಾರಾಮನ್, ಪುರಂದರದಾಸರ ರಾಗಿ ತನ್ನಿರಿ ಭಿಕ್ಷೆಕೆ ರಾಗಿ ತನ್ನಿರಿ, ಭೋಗ್ಯರಾಗಿ, ಯೋಗ್ಯರಾಗಿ, ಭಾಗ್ಯವಂತರಾಗಿ, ನೀವು ಭಿಕ್ಷಕೆ ರಾಗಿ ತನ್ನಿರಿ ಎಂಬ ಜನಪ್ರಿಯ ಕೀರ್ತನೆ ಹಾಡಿದರು.
ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಸುಮನ್ ಬಿಲ್ಲಾ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಬಳಿಕ ಮೈಸೂರಿನ ತಾವರೆಕಟ್ಟೆಯಲ್ಲಿ ದೇಶದಲ್ಲಿ ವಿನೂತನ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಪ್ಲಾನೆಟೋರಿಯಂ ಕಟ್ಟಡಕ್ಕೆ ಭೇಟಿನೀಡಿದ ಸಚಿವೆ ನಿರ್ಮಲಾ ಕಾಮಗಾರಿ ಪರಿಶೀಲಿಸಿದರು. ಮುಂದಿನ ಸೆಪ್ಟೆಂಬರ್ ನಲ್ಲಿ ಉದ್ಘಾಟನೆ ನೆರವೇರಲಿದ್ದು ಸಾಕಷ್ಟು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ ಎಂದರು.
ಅಂದಹಾಗೆ 3 ದಿನಗಳ ಕಾಲ ಸಂಗೀತ ಕಾರ್ಯಕ್ರಮ ನಡೆಯಲಿದೆ.
Advertisement