ಹುಬ್ಬಳ್ಳಿ: ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ʻಟೋಕನ್ʼ ಮೊರೆ ಹೋಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈ ಬಾರಿ ಉಪ ಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಬೇಕೆಂಬ ಭರದಲ್ಲಿ ಕಾಂಗ್ರೆಸ್ ಪಕ್ಷ ಟೋಕನ್ ಮೂಲಕ ಹಣ ಹಂಚಿಕೆ ಶುರು ಮಾಡಿದೆ. ಟೋಕನ್ ತೋರಿಸಿದವರಿಗೆ ಹಣ ಕೊಟ್ಟು ಕಳಿಸುವ ವ್ಯವಸ್ಥೆ ಮಾಡಿದೆ ಎಂಬುದು ಮಾದ್ಯಮಗಳಲ್ಲಿ ವರದಿಯಾಗಿದೆ. ಕಾಂಗ್ರೆಸ್ ಲೂಟಿ ಮಾಡಿದ್ದನ್ನು ಹೀಗೆ ಹಂಚುತ್ತಿದೆ ಎಂದು ದೂರಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅದೆಷ್ಟೇ ಟೋಕನ್, ಹಣ ಹಂಚಿದರೂ ಗೆಲ್ಲೋದು ನಾವೇ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಪರ ಒಲವಿದೆ. ಪ್ರಚಾರದ ವೇಳೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹಾಗಾಗಿ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಲಿದೆ. ಸಂಡೂರು, ಶಿಗ್ಗಾವಿಯಲ್ಲಿ ಬಿಜೆಪಿ ಮತ್ತು ಚನ್ನಪಟ್ಟಣದಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ಕೇಂದ್ರ ಬಸ್ ನಿಲ್ದಾಣ ಸಹ ವಕ್ಫ್ ಆಸ್ತಿ ಎಂಬುದಾಗಿ ವಕ್ಫ್ ಮಂಡಳಿ ಹೇಳುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಜಮೀನು ವಕ್ಫ್ ಆಸ್ತಿ ಆಯಿತೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎನ್ನಲಾದ ರೈತ ರುದ್ರಪ್ಪ ಅವರ ಹಾನಗಲ್ ತಾಲ್ಲೂಕಿನ ಹರನಗಿರಿ ಗ್ರಾಮಕ್ಕೆ ಭೇಟಿ ನೀಡಿದ ಅವರು, 'ವಕ್ಫ್ ಮೂಲಕ ರಾಜ್ಯ ಸರ್ಕಾರ, 9 ಲಕ್ಷ ಎಕರೆ ಜಮೀನು ಕಬಳಿಸಲು ಹೊರಟಿದೆ' ಎಂದರು. ಬೆಂಗಳೂರಿನ ಮೆಜೆಸ್ಟಿಕ್, 175 ಎಕರೆ ಇದೆ. ಇದು ಸಹ ವಕ್ಫ್ ಆಸ್ತಿಯೆಂದು ಹೇಳುತ್ತಿದ್ದಾರೆ. ನಾಳೆ ವಿಧಾನಸೌಧವೂ ವಕ್ಫ್ ಆಸ್ತಿಯಾದರೂ ಆಶ್ಚರ್ಯವಿಲ್ಲ' ಎಂದು ತಿಳಿಸಿದರು.
Advertisement