BSY ವಿರುದ್ಧ ಪ್ರಾಸಿಕ್ಯೂಷನ್ ಗೆ ಸರ್ಕಾರದ ತಯಾರಿ; ರಸ್ತೆ ಅಪಘಾತ: 4 ಸಾವು; ಅತ್ಯಾಚಾರ, ಕೊಲೆ: 3 ಮಂದಿಗೆ ಮರಣದಂಡನೆ; ಅಗ್ನಿ ಅವಘಡ: ಓರ್ವ ಕಾರ್ಮಿಕ ಸಜೀವ ದಹನ; ಇವು ಇಂದಿನ ಪ್ರಮುಖ ಸುದ್ದಿಗಳು 09-11-2024

News highlights of the day
ಸುದ್ದಿ ಮುಖ್ಯಾಂಶಗಳು online desk

1. ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಪಡೆಯಲು ಸರ್ಕಾರ ಮುಂದು

ಕೋವಿಡ್-19 ಸಮಯದಲ್ಲಿ ಉಪಕರಣಗಳು ಮತ್ತು ಔಷಧಿ ಖರೀದಿಯಲ್ಲಿನ ಅವ್ಯವಹಾರಗಳ ಕುರಿತು ತನಿಖೆ ನಡೆಸಿರುವ ನ್ಯಾ.ಮೈಕೆಲ್ ಡಿ ಕುನ್ಹಾ ನೇತೃತ್ವದ ತನಿಖಾ ಆಯೋಗ ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಬಿ ಶ್ರೀರಾಮುಲು ವಿರುದ್ಧ ಕಾನೂನು ಕ್ರಮ ಜರುಗಿಸಲು ಶಿಫಾರಸು ಮಾಡಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕೋವಿಡ್-19 ಸಮಯದಲ್ಲಿ ಉಪಕರಣಗಳು ಮತ್ತು ಔಷಧಿಗಳ ಖರೀದಿಯಲ್ಲಿ "ಲೂಟಿ" ನಡೆದಿರುವುದು ಸ್ಪಷ್ಟವಾಗಿದೆ ಎಂದು ಸಚಿವರು ಹೇಳಿದರು. ಅಂದಿನ ಸರ್ಕಾರ ಹೆಣಗಳ ಮೇಲೆ ಹಣ ಸಂಪಾದಿಸಿತು. ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡಿತು" ಎಂಬ ಕಾಂಗ್ರೆಸ್ ಆರೋಪವನ್ನು ತನಿಖಾ ವರದಿ ಸಾಬೀತುಪಡಿಸುತ್ತದೆ". ಕುನ್ಹಾ ಆಯೋಗದ ಶಿಫಾರಸನ್ನು ಸಂಪುಟ ಉಪಸಮಿತಿ ಪರಿಶೀಲನೆ ಮಾಡುತ್ತಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

ತಮ್ಮ ವಿರುದ್ಧದ ಪ್ರಾಸಿಕ್ಯೂಷನ್ ಗೆ ಅನುಮತಿ ಪಡೆಯಲು ಸರ್ಕಾರ ತಯಾರಿ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ಪ್ರಾಸಿಕ್ಯೂಷನ್ಗೆ ಶಿಫಾರಸು ಮಾಡಿರುವುದರ ಹಿಂದೆ ರಾಜಕೀಯ ‌ದುರುದ್ದೇಶವಿದೆ‌ ಎಂದು ಹೇಳಿದ್ದಾರೆ. ನಾವು ಯಾವ ಹಗರಣವನ್ನೂ‌ ಮಾಡಿಲ್ಲ. ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡಿದ್ದೇವೆ. ರಾಜಕೀಯ ದುರುದ್ದೇಶದಿಂದ ಹಳೆಯದನ್ನು ಕೆದಕುವ ಪ್ರಯತ್ನ ಮಾಡುತ್ತಿದ್ದಾರೆ. ಅದರಿಂದ ಅವರಿಗೆ ಲಾಭ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಅದರಿಂದ ಅವರಿಗೇನೂ ಲಾಭ ಆಗೋದಿಲ್ಲ ಯಾವ ತನಿಖೆಗೂ ಬೇಕಿದ್ದರೆ ಕೊಡಲಿ ಎಂದು ಯಡಿಯೂರಪ್ಪ ಸವಾಲು ಹಾಕಿದ್ದಾರೆ.

2. ಚನ್ನಪಟ್ಟಣದಲ್ಲಿ ಭದ್ರತೆ ಹೆಚ್ಚಳ; ಅರೆಸೇನಾಪಡೆ ಆಗಮನ

ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವ್ ಕ್ಷೇತ್ರಗಳ ಉಪ ಚುನಾವಣೆ ನವೆಂಬರ್ 13ರಂದು ನಡೆಯಲಿದೆ. ರಾಜಕೀಯವಾಗಿ ಭಾರೀ ಪೈಪೋಟಿ ಇರುವುದರಿಂದ ಸೂಕ್ಷ್ಮ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಇಂದಿನಿಂದ ಭದ್ರತೆ ಹೆಚ್ಚಿಸಲಾಗಿದೆ. ಇಂದು ಪಟ್ಟಣಕ್ಕೆ ಅರೆಸೇನಾಪಡೆ ಆಗಮಿಸಿದ್ದು ಸೂಕ್ತ ಭದ್ರತೆ ಒದಗಿಸಲಾಗಿದೆ. ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿ, ಪ್ಯಾರಾಮಿಲಿಟರಿ ಪಡೆಯ 8 ತುಕಡಿಗಳು ಆಗಮಿಸಿದ್ದು, ಅವುಗಳಲ್ಲಿ 7 ತುಕಡಿಗಳನ್ನು 197 ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ಮಾಹಿತಿ ನೀಡಿ, ಕ್ಷೇತ್ರದ ಬಹಿರಂಗ ಪ್ರಚಾರ ಕಾರ್ಯ ಬುಧವಾರ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ ಎಂದು ತಿಳಿಸಿದ್ದಾರೆ.

3. ಅತ್ಯಾಚಾರ ಪ್ರಕರಣ: 3 ಮಂದಿಗೆ ಮರಣದಂಡನೆ

ಮಂಗಳೂರಿನ ಗ್ರಾಮಾಂತರ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರು ವಲಸೆ ಕಾರ್ಮಿಕರಿಗೆ ಮರಣದಂಡನೆ ವಿಧಿಸಲಾಗಿದೆ. 2021 ರ ನವೆಂಬರ್ 21 ರಂದು ಮಂಗಳೂರು ಗ್ರಾಮಾಂತರ ಪೊಲೀಸ್ ವ್ಯಾಪ್ತಿಯ ತಿರುವೈಲು ಗ್ರಾಮದ ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶ ಹಾಗೂ ಜಾರ್ಖಂಡ್ ಮೂಲದ ಆರೋಪಿಗಳು ತಮ್ಮ ಸಹೋದ್ಯೋಗಿಯ 8 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು. ಘಟನೆ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ನಾಲ್ಕನೇ ಆರೋಪಿ ಮುನೀಮ್ ಸಿಂಗ್ ಇನ್ನೂ ತಲೆ ಮರೆಸಿಕೊಂಡಿದ್ದಾನೆ. ಮಂಗಳೂರಿನ ಪೋಕ್ಸೊ ನ್ಯಾಯಾಲಯ ಆರೋಪಿಗಳಿಗೆ ಮರಣದಂಡನೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.

4. ಅಗ್ನಿ ಅವಘಡ: ಓರ್ವ ಕಾರ್ಮಿಕ ಸಜೀವ ದಹನ

ಹೊಸೂರು-ಬೆಂಗಳೂರು ಹೆದ್ದಾರಿಯಲ್ಲಿ ಅತ್ತಿಬೆಲೆ ಸಮೀಪದ ಯಡವನಹಳ್ಳಿ ಬಳಿ ಇರುವ ಶ್ರೀರಾಮ್ ಅಂಡ್ ಕೊ ಪ್ಲೈವುಡ್‌ ಫ್ಯಾಕ್ಟರಿಯೊಂದರಲ್ಲಿ ಇಂದು ಮುಂಜಾನೆ 3.40ರ ಸುಮಾರಿಗೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದ್ದು, ಓರ್ವ ಕಾರ್ಮಿಕ ಜೀವಂತ ದಹನವಾಗಿದ್ದಾರೆ. ಮೃತರನ್ನು ಉತ್ತರ ಪ್ರದೇಶ ಮೂಲದ ಗೋವಿಂದ್ (24) ಎಂದು ಗುರುತಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅಗ್ನಿ ಅವಘಡದಲ್ಲಿ 5 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5. ಕಲಬುರಗಿ: ರಸ್ತೆ ಅಪಘಾತದಲ್ಲಿ ನಾಲ್ವರು ಸಾವು

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮರಗುತ್ತಿ ಕ್ರಾಸ್ ಬಳಿ ಪಿಕಪ್ ಗೂಡ್ಸ್ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ. ಮೃತರು ಹೈದರಾಬಾದ್ ಮೂಲದವರಾಗಿದ್ದು, ಕಾರು ಚಾಲಕನ ಗುರುತು ಪತ್ತೆಯಾಗಿಲ್ಲ. ಪೊಲೀಸ್ ಮೂಲಗಳ ಪ್ರಕಾರ, ಕುಟುಂಬವು ಅಫಜಲಪುರ ತಾಲೂಕಿನ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com