ಹಾವೇರಿ: ಹಾನಗಲ್ಲ ತಾಲೂಕಿನ ಹರನಗಿರಿ ಗ್ರಾಮದ ರೈತ ಚನ್ನಪ್ಪ ಬಾಳಿಕಾಯಿ ಅವರ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಶನಿವಾರ ಭೇಟಿ ನೀಡಿದ್ದು, ಕುಟುಂಬಕ್ಕಾಗಿರುವ ಅನ್ಯಾಯದ ಕುರಿತು ಮಾಹಿತಿ ಪಡೆದುಕೊಂಡರು.
ಹಾವೇರಿ ಜಿಲ್ಲೆಯಲ್ಲಿ 1964ರಲ್ಲಿ ಖರೀದಿಯಾದ ಜಮೀನನ್ನು 2015ರಲ್ಲಿ ವಕ್ಫ್ ಆಸ್ತಿಯನ್ನಾಗಿ ನಮೂದು ಮಾಡಲಾಗಿದ್ದು, ಬೆಳೆದು ನಿಂತ ಹತ್ತಿ, ಕಬ್ಬು ಬೆಳೆ ನಾಶ ಮಾಡಿ ವಶಪಡಿಸಿಕೊಂಡಿದ್ದಾರೆನ್ನಲಾಗಿದೆ. ರೈತ ರುದ್ರಪ್ಪ ಜಮೀನಿನಲ್ಲಿ ಉಳುಮೆ ಮಾಡಿದ್ದು, ಯಾವುದೇ ನೋಟಿಸ್ ನೀಡದೆ ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು. ಇದರಿಂದ ನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದರ ಬೆನ್ನಲ್ಲೇ ವಕ್ಫ್ ತಿದ್ದುಪಡಿ ಮಸೂದೆ 2024 ರ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಮೃತನ ಕುಟುಂಬವನ್ನು ಭೇಟಿ ಮಾಡಿದ್ದು, ಪಾಲ್ ಅವರ ಈ ನಡೆ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ, ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿತ್ತು.
ಈ ನಡುವೆ ಶನಿವಾರ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಮುರುಗೇಶ್ ನಿರಾಣಿ, ಎಂಎಲ್ ಸಿ ರವಿಕುಮಾರ್ ಮತ್ತಿತರರನ್ನು ಒಳಗೊಂಡ ಬಿಜೆಪಿ ನಿಯೋಗ ಚನ್ನಪ್ಪ ಅವರನ್ನು ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಸಾಂತ್ವನ ಹೇಳಿ ಒಗ್ಗಟ್ಟು ಪ್ರದರ್ಶಿಸಿದರು.
ಭೇಟಿ ಬಳಿಕ ಮಾತನಾಡಿದ ಪ್ರಹ್ಲಾದ್ ಜೋಶಿಯವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವಕ್ಫ್ ಒತ್ತುವರಿ ವಿರುದ್ಧದ ಪ್ರತಿಭಟನೆ ಹತ್ತಿಕ್ಕಲು ರಾಜ್ಯ ಸರ್ಕಾರ ಪೊಲೀಸರನ್ನು ಬಳಸಿಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಸೂಚನೆ ನೀಡಿದರೂ ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಾರೆಂದು ಕಿಡಿಕಾರಿದರು.
Advertisement