ವಿಜಯಪುರ: ಕುಡಿದ ಅಮಲಿನಲ್ಲಿ ವಿವಾಹಿತ ಮಹಿಳೆಯೊಬ್ಬರ ವಿಚಾರಕ್ಕೆ 21 ವರ್ಷದ ಯುವಕನನ್ನು ಆತನ ಸ್ನೇಹಿತನೇ ಕೊಲೆ ಮಾಡಿ, ತನ್ನ ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾನೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಯುವಕನನ್ನು ಸುನೀಲ್ ಎಂದು ಗುರುತಿಸಲಾಗಿದೆ. ಆತನ ಸ್ನೇಹಿತ ಸಂತೋಷ್(23), ಸುನೀಲ್‌ನ ಕತ್ತಿಗೆ ಹಗ್ಗ ಹಾಕಿ ಕತ್ತಿನ ಮೇಲೆ ಕಾಲಿಟ್ಟು ಆತನ ಉಸಿರು ಗಟ್ಟಿಸಿ ಕೊಲೆ ಮಾಡುವ ಕೃತ್ಯದ ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಜಮೀನಿನಲ್ಲಿ ಭಾನುವಾರ ಈ ಘಟನೆ ನಡೆದಿದೆ.
ಇಬ್ಬರು ಯುವಕರು ಸ್ಥಳೀಯ ಬಾರ್‌ನಲ್ಲಿ ಮದ್ಯ ಸೇವಿಸಿದ ನಂತರ ಮತ್ತೊಂದು ಸುತ್ತು ಮದ್ಯ ಸೇವಿಸಲು ಜಮೀನಿಗೆ ತೆರಳಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಜಮೀನಿನಲ್ಲಿ ಮದ್ಯ ಸೇವಿಸುತ್ತಿದ್ದಾಗ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯ ವಿಚಾರ ಪ್ರಸ್ತಾಪವಾಗಿದೆ. ವಿಧವೆಯೊಂದಿಗೆ ಸಂಬಂಧದ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಈ ಜಗಳ ವಿಕೋಪಕ್ಕೆ ಹೋಗಿದ್ದು, ಕೋಪದ ಭರದಲ್ಲಿ ಸಂತೋಷ್, ಸುನೀಲ್ ಕತ್ತಿಗೆ ಹಗ್ಗ ಹಾಕಿ ಕತ್ತಿನ ಮೇಲೆ ಕಾಲಿಟ್ಟು ಆತನ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಕೃತ್ಯವನ್ನು ವಿಡಿಯೋ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ವಿಡಿಯೋ ರೆಕಾರ್ಡ್ ಮಾಡಿದ ನಂತರ, ಆರೋಪಿಯು ಅದನ್ನು ತನ್ನ ಸ್ನೇಹಿತರೊಂದಿಗೆ ವಾಟ್ಸಾಪ್‌ನಲ್ಲಿ ಹಂಚಿಕೊಂಡಿದ್ದಾನೆ ಎಂದು ವರದಿಯಾಗಿದೆ. ಈ ಕೊಲೆಯಲ್ಲಿ ಇನ್ನೊಬ್ಬ ವ್ಯಕ್ತಿಯ ಭಾಗಿಯಾಗಿರುವುದು ಸಹ ಬೆಳಕಿಗೆ ಬಂದಿದೆ. ಆದರೆ ಇದು ಇನ್ನೂ ತನಿಖೆಯ ಹಂತದಲ್ಲಿದೆ" ಎಂದು ಅಧಿಕಾರಿ ಹೇಳಿದ್ದಾರೆ.
ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
Advertisement