ಬೆಂಗಳೂರು: ನಡು ರಸ್ತೆಯಲ್ಲೇ ಕತ್ತು ಕೊಯ್ದು ಪತ್ನಿಯ ಬರ್ಬರ ಹತ್ಯೆ; ಪತಿ ಆತ್ಮಹತ್ಯೆಗೆ ಯತ್ನ
ಬೆಂಗಳೂರು: ಶೀಲ ಶಂಕಿಸಿ ನಡು ರಸ್ತೆಯಲ್ಲೇ ಪತ್ನಿಯ ಕತ್ತು ಕೊಯ್ದು ಹತ್ಯೆ ಮಾಡಿದ ಪತಿಯೊಬ್ಬ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜೀವನ್ ಬಿಮಾ ನಗರದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಚೆಲ್ಲಘಟ್ಟದ ನಿವಾಸಿ ಸಂಗೀತಾ (30) ಹತ್ಯೆಯಾದ ಮಹಿಳೆಯಾಗಿದ್ದಾರೆ. ಕೃತ್ಯದ ಬಳಿಕ ಪತಿ ನಾಗರಾಜ್ (35) ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸಂಗೀತಾ ಅವರು ತರಕಾರಿ ವ್ಯಾಪಾರ ಮಾಡುತ್ತಿದ್ದರು. ಆರು ವರ್ಷಗಳ ಹಿಂದೆ ನಾಗರಾಜ್ ಅವರನ್ನು ಮದುವೆ ಆಗಿದ್ದರು. ದಂಪತಿಗೆ ನಾಲ್ಕು ವರ್ಷದ ಮಗುವಿದೆ.
ಮಂಗಳವಾರ ರಾತ್ರಿ ಕುಳ್ಳಪ್ಪ ಗಾರ್ಡನ್ನಲ್ಲಿರುವ ಸಂಬಂಧಿ ಮನೆಗೆ ದಂಪತಿ ಬಂದಿದ್ದರು. ರಾತ್ರಿ ಸಂಬಂಧಿಕರ ಮನೆಯಿಂದ ಹೊರಗೆ ಹೋಗಿದ್ದ ನಾಗರಾಜ್, ಮದ್ಯ ಸೇವಿಸಿ ವಾಪಸ್ ಬಂದಿದ್ದ. ಈ ವೇಳೆ ದಂಪತಿ ಮಧ್ಯೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ಹೋಗಿ ಪತ್ನಿಯನ್ನು ತಳ್ಳಿ ಕತ್ತು ಕೊಯ್ದು ಪತಿ ಕೊಲೆ ಮಾಡಿದ್ದಾನೆ.
ಬಳಿಕ ತಾನೂ ಕತ್ತು ಕೊಯ್ದುಕೊಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಆರೋಪಿಯನ್ನು ಸಂಬಂಧಿಕರು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿಕಿತ್ಸೆ ಬಳಿಕ ಆರೋಪಿಯನ್ನು ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ