ಮೈಸೂರು: ಮೈಸೂರಿನ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ಉದ್ಭೂರುಹಾಡಿ ಮತ್ತು ಕೆರೆಹಾಡಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಈ ವೇಳೆ ಆದಿವಾಸಿ ಬುಡಕಟ್ಟು ಸಮುದಾಯದ ಜನರೊಂದಿಗೆ ನೃತ್ಯ ಮಾಡಿದರು.
ಮೂರು ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಲೇ ರಿಲ್ಯಾಕ್ಸ್ ಮೂಡ್ ನಲ್ಲಿದ್ದ ಸಿಎಂ ಸಿದ್ದರಾಮಯ್ಯ ಮಂಗಳವಾರ ಹೆಚ್.ಡಿ. ಕೋಟೆ ತಾಲೂಕಿನ ಕೆರೆಹಾಡಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅವರನ್ನು ಹಾಡಿಯ ನಿವಾಸಿಗಳು ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತಿಸಿದರು. ಈ ವೇಳೆ ನೃತ್ಯ ನೋಡುತ್ತಿದ್ದ ಸಿದ್ದರಾಮಯ್ಯ ಬಳಿಕ ತಾವೇ ಕೆಲ ಹೊತ್ತು ಹಾಡಿಯ ಸಾಂಪ್ರದಾಯಿಕ ನೃತ್ಯಕ್ಕೆ ಕೋಲಾಟದ ಕೋಲು ಹಿಡಿದು ಹೆಜ್ಜೆ ಹಾಕಿ ಸಂಭ್ರಮಿಸಿದರು.
ಸಿದ್ದರಾಮಯ್ಯ ಅವರು ತಮ್ಮ ಹುಟ್ಟೂರಾದ ಸಿದ್ದರಾಮನಹುಂಡಿಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಕುಣಿದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಕೆಲಸದ ಒತ್ತಡದ ನಡುವೆ ನೃತ್ಯದಲ್ಲಿ ಭಾಗವಹಿಸಿ ಮನಸ್ಸನ್ನು ಹಗುರ ಮಾಡಿಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ದಿನದ ಮೈಸೂರು ಜಿಲ್ಲಾ ಪ್ರವಾಸದಲ್ಲಿದ್ದು, ಅವರು ಇಂದು ಹೆಚ್. ಡಿ ಕೋಟೆ ಪಟ್ಟಣದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಹಾಗೂ ವಿವಿಧ ರೀತಿಯ ಕಾಮಗಾರಿಗಳ ಶಂಕು ಸ್ಥಾಪನೆಯಲ್ಲಿ ಭಾಗವಹಿಸಿದರು.
ನಂತರ ಕೆರೆ ಹಾಡಿಯ ಜನರ ನೃತ್ಯಕ್ಕೆ ಹೆಜ್ಜೆ ಹಾಕಿದ ಅವರು, ಆದಿವಾಸಿ ಬುಡಕಟ್ಟು ಜನಾಂಗದ ಜೊತೆ ಸಂವಾದ ನಡೆಸಿ, ಹಾಡಿ ಸಮಸ್ಯೆ ಆಲಿಸಿದರು. ಕೆರೆ ಹಾಡಿಯ ಪಡಸಾಲೆಯಲ್ಲಿ ಕೂತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಿಯ ಜನರ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಆದಿವಾಸಿ ಸಮುದಾಯದ ಗಣೇಶ್ ಮತ್ತು ರಮೇಶ್ ಕುಟುಂಬದವರು ತಾವು ತಂದಿದ್ದ ಜೇನುತುಪ್ಪ ಮತ್ತು ಬೆಟ್ಟದ ನೆಲ್ಲಿಕಾಯಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿ, ಸತ್ಕರಿಸಿದರು. ಜೇನುತುಪ್ಪದಲ್ಲಿ ಕಾಡುಗೆಣಸು ಅದ್ದಿ ಸವಿದ ಮುಖ್ಯಮಂತ್ರಿಗಳು ಬಳಿಕ 500 ರೂಪಾಯಿ ನೀಡಿ ಜೇನುತುಪ್ಪ ಖರೀದಿಸಿದರು.
ಪರಿಶಿಷ್ಠ ವರ್ಗದವರ ಒಳ ಮೀಸಲಾತಿಗೆ ಕ್ರಮ: ಸಿಎಂ ಭರವಸೆ
ಕೆರೆಹಾಡಿಗೆ ಭೇಟಿ ನೀಡಿ ಅರಣ್ಯವಾಸಿಗಳ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ನೀಡಿದ ಸೂಚನೆ ಮತ್ತು ದೀರ್ಘಕಾಲದ ಪರಿಹಾರ ಬಯಸುವ ಸಮಸ್ಯೆಗಳ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿ ಟ್ವೀಟ್ ಮಾಡಿದ್ದು, 'ಆದಿವಾಸಿ/ಅರಣ್ಯವಾಸಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಾಗಿ ಸದ್ಯದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವನ್ಯಜೀವಿ ಮಂಡಳಿ ಸಭೆ ಕರೆದು ಅರಣ್ಯಾಧಿಕಾರಿಗಳಿಂದ ಅರಣ್ಯವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು.
ಹಲವು ದಶಕಗಳಿಂದ ಕೆರೆಹಾಡಿ ಸೇರಿದಂತೆ ಒಂಬತ್ತು ಹಾಡಿಗಳಿಗೆ ವಿದ್ಯುತ್ ಸಂಪರ್ಕ ಇಲ್ಲ, ಕುಡಿಯುವ ನೀರಿಗೆ ಸಮಸ್ಯೆ ಇದೆ. ಇದು ಗಂಭಿರವಾದುದ್ದು. ಯಾವ ಅರಣ್ಯ ಕಾಯ್ದೆ ಕೂಡ ಅರಣ್ಯವಾಸಿಗಳಿಗೆ ಕರೆಂಟು, ನೀರು ಕೊಡಬೇಡಿ ಎಂದು ಹೇಳುವುದಿಲ್ಲ. ಅರಣ್ಯಾಧಿಕಾರಿಗಳು ಅನಗತ್ಯ ಕಿರುಕುಳ, ತೊಂದರೆ ಕೊಡಬಾರದು. ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿಯವರು ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಒಂದು ತಿಂಗಳಲ್ಲಿ ಕೆರೆಹಾಡಿ ಮತ್ತು ಇತರೆ ಎಂಟು ಹಾಡಿಗಳ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕದ ಸಮಸ್ಯೆ ಬಗೆಹರಿಸಲಿದ್ದಾರೆ ಎಂದಿದ್ದಾರೆ.
ಅಲ್ಲದೆ ಹಕ್ಕುಪತ್ರ ಇದ್ದರೂ ಅರಣ್ಯಾಧಿಕಾರಿಗಳು ಮನೆ ಕಟ್ಟಲು ಬಿಡುತ್ತಿಲ್ಲ, ಎರಡು-ಮೂರು ಎಕರೆ ಜಾಗದಲ್ಲಿ ಹಲವಾರು ದಶಕಗಳಿಂದ ಉಳುಮೆ ಮಾಡುತ್ತಿದ್ದರೂ ಕೇವಲ 2, 3 ಗುಂಟೆಗೆ ಹಕ್ಕು ಪತ್ರ ನೀಡಿದ್ದಾರೆ. ಜಮೀನಿನಲ್ಲಿ ಟ್ರಾಕ್ಟರ್ ಬಳಸಲು ಅವಕಾಶ ನೀಡುತ್ತಿಲ್ಲ ಎನ್ನುವ ದೂರು ಬಂದಿದೆ. ಆದಿವಾಸಿಗಳು ಅಂದರೆ ಅವರು ಅರಣ್ಯದ ಭಾಗವೇ ಆಗಿದ್ದಾರೆ. ಇವರಿಂದ ಅರಣ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಆದ್ದರಿಂದ ಇವರಿಗೆ ಅನಗತ್ಯ ತೊಂದರೆ ಕೊಡಬಾರದು ಎಂಬ ಸ್ಪಷ್ಟ ಸೂಚನೆ ನೀಡಿದ್ದೇನೆ. ವನ್ಯ ಜೀವಿ ಮಂಡಳಿಗೆ ನಾನೇ ಅಧ್ಯಕ್ಷ ಆಗಿದ್ದೀನಿ. ಸದ್ಯದಲ್ಲೇ ಮಂಡಳಿ ಸಭೆ ಕರೆದು ಇಲ್ಲಿನ ಬುಡಕಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇನೆ. ತಾವು ಅಲೆಮಾರಿಗಳಲ್ಲ. ಊರ ನಾಯಕರೂ ಅಲ್ಲ. ತಾವೆಲ್ಲರೂ ಕಾಡಲ್ಲೇ ಒಂದೇ ಕಡೆ ನೆಲೆಸಿರುವ ಆದಿವಾಸಿಗಳು.
ಆದ್ದರಿಂದ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ತಮ್ಮನ್ನು ಸೇರಿಸಬೇಡಿ. ನಮಗೆ ಪ್ರತ್ಯೇಕವಾದ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಎನ್ನುವ ಬೇಡಿಕೆ ಇಟ್ಟಿದ್ದಾರೆ. ಪ್ರತ್ಯೇಕ ಆದಿವಾಸಿ ನಿಗಮ ಸ್ಥಾಪನೆ ಸಂಬಂಧ ಆದಷ್ಟು ಶೀಘ್ರ ಕ್ರಮ ವಹಿಸುತ್ತೇನೆ. ನಮ್ಮಪ್ಪ ಕೂಡ ಜನಪದ ನೃತ್ಯ ಕಲಿಯೋಕೆ ನನ್ನನ್ನು ಹಾಕ್ಬಿಟ್ಟಿದ್ರು. ನಾನು ಹಠತೊಟ್ಟು ಕಾನೂನು ಪದವಿ ಮಾಡಿದ್ದಕ್ಕೆ ಇಂದು ಮುಖ್ಯಮಂತ್ರಿ ಆಗುವ ಮಟ್ಟಕ್ಕೆ ಬೆಳೆದೆ. ಈ ಆದಿವಾಸಿ ಸಮುದಾಯದ ಮಕ್ಕಳು ಕೂಡ ಅರ್ಧಕ್ಕೇ ಶಾಲೆ ನಿಲ್ಲಿಸದೆ ಶಿಕ್ಷಣ ಪಡೆಯಬೇಕು. ಆಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಮೊದಲು ನಾಲ್ಕನೇ ತರಗತಿವರೆಗೂ ಮಾತ್ರ ಆಶ್ರಮ ಶಾಲೆಗಳನ್ನು ನಾನು ಎಂಟನೇ ತರಗತಿವರೆಗೂ ವಿಸ್ತರಿಸಿದ್ದೆ. ಇದನ್ನು ಪಿಯುಸಿ ವರೆಗೂ ವಿಸ್ತರಿಸಿ ಎನ್ನುವುದು ಆದಿವಾಸಿಗಳು ಬೇಡಿಕೆಯಾಗಿದೆ, ಈ ಬಗ್ಗೆ ಸಭೆ ಕರೆದು ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಪರಿಶಿಷ್ಟ ಜಾತಿಯವರ ಒಳ ಮೀಸಲಾತಿಗೆ ಮುಂದಾಗಿರುವ ರೀತಿಯಲ್ಲೇ , ಪರಿಶಿಷ್ಠ ವರ್ಗದವರ ಒಳ ಮೀಸಲಾತಿಗೆ ಕ್ರಮ ವಹಿಸಬೇಕು ಎನ್ನುವ ಬೇಡಿಕೆ ಇದೆ. ಆದರೆ ಎಸ್ ಸಿ ಒಳಮೀಸಲಾತಿ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಅದರ ಆಧಾರದಲ್ಲಿ ಮುಂದುವರೆದಿದ್ದೇವೆ. ಎಸ್ ಟಿ ಒಳ ಮೀಸಲಾತಿ ಬಗ್ಗೆ ಏನೂ ತೀರ್ಪು ಬಂದಿಲ್ಲ. ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
Advertisement