ತೀವ್ರ ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಸಂಜೆ 5 ಗಂಟೆಯವರೆಗೆ ಚನ್ನಪಟ್ಟದಲ್ಲಿ ಶೇ. 84.26ರಷ್ಟು ಮತದಾನವಾಗಿದೆ. ಇನ್ನೂ ಸಂಡೂರಿನಲ್ಲಿ ಶೇ.71.47 ರಷ್ಟು ಹಾಗೂ ಶಿಗ್ಗಾಂವಿಯಲ್ಲಿ ಶೇ.75.07ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಚನ್ನಪಟ್ಟಣದ NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್, ಶಿಗ್ಗಾಂವಿಯ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್, ಸಂಡೂರಿನ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ, ಬಿಜೆಪಿಯ ಅಭ್ಯರ್ಥಿ ಬಂಗಾರು ಹನುಮಂತು ಸೇರಿದಂತೆ 54 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು ನವೆಂಬರ್ 13ರಂದು ಫಲಿತಾಂಶ ಘೋಷಣೆಯಾಗಲಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಯೂನಿಯನ್ ಬ್ಯಾಂಕ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ಹೊರಡಿಸಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ ಸೆಕ್ಷನ್ 35ಎ ಅಡಿಯ ವ್ಯಾಖ್ಯಾನ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಲಾಗುವುದಿಲ್ಲ. ಒಂದು ವೇಳೆ ಅನುಮತಿ ನೀಡಿದರೆ ಎಲ್ಲಾ ಬ್ಯಾಂಕ್ಗಳೂ ಇದನ್ನೇ ಕೇಳಬಹುದು. ಆಗ ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಆ್ಯಕ್ಟ್ ನಿರರ್ಥಕವಾಗಬಹುದು ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್ ಪೀಠ ಅರ್ಜಿಯನ್ನು ತಿರಸ್ಕರಿಸಿದೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಆರೋಪಿಗಳಿಗೆ ಒಟ್ಟು ಆರು ಪ್ರಕರಣಗಳಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸತೀಶ್ ಸೈಲ್ ಹಾಗೂ ಇತರ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಅಮಾನತು ಮಾಡಿದೆ. ಅಲ್ಲದೆ ಆರು ವಾರದಲ್ಲಿ ದಂಡದ ಮೊತ್ತದ ಶೇ. 25ರಷ್ಟನ್ನು ವಿಚಾರಣಾಧೀನ ನ್ಯಾಯಾಲಯದಲ್ಲಿ ಠೇವಣಿ ಇಡುವಂತೆ ಎಂದು ಹೈಕೋರ್ಟ್ ಆದೇಶಿಸಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕರ್ನಾಟಕದಿಂದಲೂ ಜೀವ ಬೆದರಿಕೆ ಸಂದೇಶ ಹೆಚ್ಚಾಗುತ್ತಲೇ ಇದೆ. ಇತ್ತೀಚಿಗಷ್ಟೇ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಹೆಸರಲ್ಲಿ ನಟ ಸಲ್ಮಾನ್ ಖಾನ್‌ರಿಂದ 5 ಕೋಟಿ ರೂ.ಗೆ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಹಾವೇರಿಯಲ್ಲಿ ಮೆಸೇಜ್ ಮಾಡಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು. ಇದೀಗ ಇಂತಹದ್ದೇ ಸಂದೇಶ ಕಳುಹಿಸಿದ ಆರೋಪದ ಮೇಲೆ ರಾಯಚೂರು ಜಿಲ್ಲೆಯ ಮಾನ್ವಿಯ 24 ವರ್ಷದ ಸುಹೇಲ್ ಪಾಷಾ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರದ ಗೀತ ರಚನೆಕಾರನಾಗಿರುವ ಸುಹೇಲ್, ತನ್ನ ಹೊಸ ಹಾಡನ್ನು ಜನಪ್ರಿಯ ಮಾಡುವ ನಿಟ್ಟಿನಲ್ಲಿ ಇಂಥದ್ದೊಂದು ಬೆದರಿಕೆ ಹಾಕಿದ್ದಾನೆ ಎಂಬ ವಿಷಯ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಮುಡಾ ಹಗರಣದ ದೂರುದಾರ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ನೀಡಿದ್ದ ದೂರಿನ ಆಧಾರದ ಮೇಲೆ ಇಂದು ಎಫ್ಐಆರ್ ದಾಖಲಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ಮುಡಾದಿಂದ ಪಡೆದ ಸೈಟ್ ಕ್ರಯಪತ್ರದ ಮುದ್ರಾಂಕ ಶುಲ್ಕದ ಬಗ್ಗೆ ಸ್ನೇಹಮಯಿ ಕೃಷ್ಣ ಆಕ್ಷೇಪಿಸಿದ್ದರು. ಸ್ನೇಹಮಯಿ ಕೃಷ್ಣ ಬ್ಲಾಕ್ಮೇಲ್ ಮಾಡುತ್ತಿದ್ದಾರೆ. ಪ್ರತಿನಿತ್ಯ ಸಿಎಂ ವಿರುದ್ಧ ಒಂದಿಲ್ಲೊಂದು ಆರೋಪಮಾಡಿ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಲಕ್ಷ್ಮಣ ದೂರು ನೀಡಿದ್ದರು. ಹೀಗಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
Advertisement