ಬೆಂಗಳೂರು: ಶ್ರೀರಂಗಪಟ್ಟಣದ ಐತಿಹಾಸಿಕ ಜಾಮಾ ಮಸೀದಿ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಾವನ್ನು ತೆರವುಗೊಳಿಸುವಂತೆ ಮಂಡ್ಯ ಜಿಲ್ಲಾಡಳಿತ ಮತ್ತು ರಾಜ್ಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಮನವಿ ಮಾಡಿದೆ.
ವಕ್ಫ್ ಬೋರ್ಡ್ ಈ ಕ್ರಮವನ್ನು ವಿರೋಧಿಸಿದ್ದು, ಮಸೀದಿಯನ್ನು ತನ್ನ ಆಸ್ತಿ ಎಂದು ಹೇಳಿಕೊಂಡಿದೆ ಮತ್ತು ಅಲ್ಲಿ ಮದರಸಾ ನಡೆಸುವ ಹಕ್ಕನ್ನು ಸಮರ್ಥಿಸಿಕೊಂಡಿದೆ.
ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದ ಅಭಿಷೇಕ್ ಗೌಡ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಅವರಿದ್ದ ವಿಭಾಗೀಯ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು.
ಮಸೀದಿಯೊಳಗೆ ಅನಧಿಕೃತ ಮದರಸಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
1951 ರಲ್ಲಿ ಜಾಮಾ ಮಸೀದಿಯನ್ನು ಸಂರಕ್ಷಿತ ಸ್ಮಾರಕವಾಗಿ ಘೋಷಿಸಲಾಯಿತು. ಆದರೂ ಅನಧಿಕೃತ ಮದರಸಾ ಚಟುವಟಿಕೆಗಳು ಅಲ್ಲಿ ಮುಂದುವರೆದಿವೆ ಎಂದು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ವಾದಿಸಿದರು.
ಕಾಮತ್ ಅವರು, ಮಸೀದಿಯಿಂದ ಮದರಸಾವನ್ನು ತೆರವುಗೊಳಿಸುವಂತೆ ಮಂಡ್ಯ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಪ್ರತಿವಾದದಲ್ಲಿ, ರಾಜ್ಯ ಸರ್ಕಾರ ಮತ್ತು ವಕ್ಫ್ ಮಂಡಳಿಯ ವಕೀಲರು ಈ ಮನವಿಯನ್ನು ವಿರೋಧಿಸಿದರು. ವಕ್ಫ್ ಬೋರ್ಡ್ 1963 ರಿಂದ ಈ ಆಸ್ತಿಯ ಮಾಲೀಕ ಎಂದು ಗುರುತಿಸಲಾಗಿದೆ ಮತ್ತು ಆದ್ದರಿಂದ ಅಲ್ಲಿ ಮದರಸಾ ಚಟುವಟಿಕೆಗಳನ್ನು ನಡೆಸುವುದು ಕಾನೂನುಬದ್ಧವಾಗಿದೆ ಎಂದು ಹೇಳಿದರು.
ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಅವರು, ವಿಚಾರಣೆಯನ್ನು ನವೆಂಬರ್ 20ಕ್ಕೆ ಮುಂದೂಡಿದ್ದಾರೆ.
Advertisement