ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಮರಿಗೌಡ ಇಂದು ಜಾರಿ ನಿರ್ದೇಶನಾಲಯದ (ED) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಶಾಂತಿನಗರದಲ್ಲಿರುವ ಕೇಂದ್ರೀಯ ಸಂಸ್ಥೆಯ ಕಚೇರಿಗೆ ಆಗಮಿಸಿದ ಮರಿಗೌಡ ವಿಚಾರಣೆ ಎದುರಿಸುತ್ತಿದ್ದಾರೆ. ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಐಎಎಸ್ ಅಧಿಕಾರಿ, ರಾಯಚೂರು ಕಾಂಗ್ರೆಸ್ ಸಂಸದ ಜಿ ಕುಮಾರ್ ನಾಯ್ಕ್ ಮತ್ತು ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಸಿ ಟಿ ಕುಮಾರ್ ಅವರನ್ನು ಬುಧವಾರ ಇಡಿ ಅಧಿಕಾರಿಗಳು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.
ಮರೀಗೌಡ ವೈಯಕ್ತಿಕ ಕಾರಣ ನೀಡಿ ಮುಡಾ ಅಧ್ಯಕ್ಷ ಸ್ಥಾನಕ್ಕೆ ಕಳೆದ ತಿಂಗಳು ರಾಜೀನಾಮೆ ನೀಡಿದ್ದರು. ಕೆಸರೆ ಗ್ರಾಮದಲ್ಲಿ ಪಾರ್ವತಿ ಅವರ ಕೃಷಿ ಭೂಮಿ 3 ಎಕರೆ 16 ಗುಂಟೆ ಸ್ವಾಧೀನಪಡಿಸಿಕೊಂಡು ಅದಕ್ಕೆ ಪ್ರತಿಯಾಗಿ 14 ಸೈಟುಗಳನ್ನು ಹಂಚಿಕೆ ಮಾಡಿರುವ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಬಿಎಂ, ಅವರ ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಮತ್ತು ಇತರರ ವಿಚಾರಣೆ ನಡೆಸಿತ್ತು.
ಈ ಹಿಂದೆ, ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ದೂರಿನ ಮೇರೆಗೆ ಮುಡಾ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆಯ ಕುರಿತ ತನಿಖೆ ವೇಳೆ ಇಡಿ ಮೈಸೂರಿನ ಹಲವು ಸ್ಥಳಗಳಲ್ಲಿ ದಾಳಿ ನಡೆಸಿತ್ತು.
Advertisement