ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಒಳಮೀಸಲಾತಿ ಜಾರಿಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನ್ಯಾಯಮೂರ್ತಿ ಎಚ್‌ಎನ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಶಿಕ್ಷಣ ಮತ್ತು ಸರಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು ಪ್ರಾಯೋಗಿಕ ಅಂಕಿಅಂಶ ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಬಗ್ಗೆ ಸೂಕ್ತ ಶಿಫಾರಸಿನೊಂದಿಗೆ ಆಯೋಗವು 2 ತಿಂಗಳ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಸಂಬಂಧ ಅ.28ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಈ ವೇಳೆ ಯಾವ ದತ್ತಾಂಶದ ಆಧಾರದ ಮೇಲೆ ಒಳಮೀಸಲಾತಿ ನಿಗದಿ ಮಾಡಬೇಕೆಂಬ ಕುರಿತು ಪ್ರತ್ಯೇಕ ಆಯೋಗ ರಚಿಸಿ ವರದಿ ಪಡೆಯಲಾಗುವುದು. ಅಲ್ಲಿಯವರೆಗೂ ಯಾವುದೇ ನೂತನ ನೇಮಕಾತಿ ಅಧಿಸೂಚನೆ ಮಾಡುವುದಿಲ್ಲ ಎಂದು ತಿಳಿಸಲಾಗಿತ್ತು.
ಅದರಂತೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಗಿದೆ. ಈ ಮೂಲಕ ನಾಲ್ಕು ದಶಕಗಳ ಪರಿಶಿಷ್ಟ ಜಾತಿಯ ಬೇಡಿಕೆಗೆ ಸರ್ಕಾರ ಸ್ಪಂದಿಸಿದಂತಾಗಿದೆ. ಇದರಿಂದ ಒಳಮೀಸಲು ಜಾರಿ ನಿರ್ಣಾಯಕ ಘಟ್ಟ ತಲುಪಿದಂತಾಗಿದೆ.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯೊಳಗೆ 101 ಉಪಗುಂಪುಗಳಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಹೇಳಿಕೆ ನೀಡಿದ್ದು, ಈ ಎಲ್ಲ ವರ್ಗಗಳನ್ನು ಸೇರಿಸಿ ಪರಿಗಣಿಸಲು ವೈಜ್ಞಾನಿಕ ವಿಧಾನದೊಂದಿಗೆ ಒಳ ಮೀಸಲಾತಿಯನ್ನು ಜಾರಿಗೆ ತರಲು ಸರ್ಕಾರ ಶ್ರಮಿಸುತ್ತಿದೆ ಎಂದು ತಿಳಿಸಿದ್ದರು. ಆದರೆ, ಪ್ರತಿಪಕ್ಷಗಳು ಆಯೋಗ ರಚನೆಯ ಕ್ರಮ ಒಳಮೀಸಲಾತಿ ಜಾರಿ ವಿಳಂಬಗೊಳಿಸುವ ಪ್ರಯತ್ನವಾಗಿದೆ ಎಂದು ಬಣ್ಣಿಸಿವೆ.
Advertisement