ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣಗಲ್ಲಿ ನಾಗೇಂದ್ರ ಅವರ ತಪ್ಪಿಲ್ಲವೆಂದು ಸಾಬೀತಾದರೆ ಸಂಪುಟಕ್ಕೆ ಮರಳಿ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಬುಧವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ ನಾಗೇಂದ್ರ ಅವರನ್ನು ಸಂಪುಟಕ್ಕೆ ವಾಪಸ್ ಸೇರ್ಪಡೆ ಮಾಡುವ ಕುರಿತಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು.
ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕ ನಂತರ ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ಸಚಿವ ಸಂಪುಟ ಪುನಾರಚನೆ ಬಗ್ಗೆ ನನಗೆ ತಿಳಿದಿಲ್ಲ, ಈ ಬಗ್ಗೆ ಸಿಎಂ ಹಾಗೂ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
ದರ್ಶನ್ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆ ವಿಳಂಬ ಆಗಿರುವ ವಿಚಾರವಾಗಿ ಮಾತನಾಡಿ, ಮೇಲ್ಮನವಿ ಸಲ್ಲಿಕೆಗೆ ವಿಳಂಬ ಆಗಿಲ್ಲ. ಯಾವಾಗ ತೀರ್ಮಾನ ಮಾಡಬೇಕು ಎಂಬ ಬಗ್ಗೆ ಗೃಹ ಇಲಾಖೆ ಕಾರ್ಯದರ್ಶಿಗಳು ತೀರ್ಮಾನ ಕೈಗೊಳ್ಳುತ್ತಾರೆ. ನಾನೂ ಕೂಡಾ ಅವರಿಗೆ ಮೇಲ್ಮನವಿ ಗೆ ಹೋಗುವುದಾದರೆ ಹೋಗಿ ಅಂತ ಹೇಳಿದ್ದೇನೆ ಎಂದು ತಿಳಿಸಿದರು.
ಪ್ರಕ್ರಿಯೆಗಳನ್ನು ಅನುಸರಿಸಿಯೇ ಇಂತಹ ಕೇಸ್ ಗಳಲ್ಲಿ ಮುಂದುವರಿಬೇಕು. ಕಾನೂನು ಇಲಾಖೆಯಿಂದ ಮಾಹಿತಿ ತೆಗೆದುಕೊಳ್ಳಬೇಕು ಹಾಗೂ ಗೃಹ ಇಲಾಖೆ ತೀರ್ಮಾನ ಕೈಗೊಳ್ಳಬೇಕಾಗಿದೆ. ಅಷ್ಟೇ ಅಲ್ಲದೆ, ಪೊಲೀಸ್ ಇಲಾಖೆಯಿಂದ ಪ್ರಸ್ತಾವನೆ ಬರಬೇಕು. ಇದೆಲ್ಲ ಆದ ನಂತರವೇ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದರು.
ಬಂಡಿಪುರದಲ್ಲಿ ರಾತ್ರಿ ಸಂಚಾರ ವಿಚಾರವಾಗಿ ಮಾತನಾಡಿ, ಈ ಹಿಂದೆಯೂ ಕೂಡ ಅನೇಕ ತೀರ್ಮಾನ ಆಗಿದೆ. ರಾತ್ರಿ ವಾಹನ ಸಂಚಾರದಿಂದಾಗಿ ಕಾಡು ಪ್ರಾಣಿಗಳು ಅಪಘಾತಕ್ಕೀಡಾಗಿ ಸತ್ತಿವೆ. ಜೊತೆಗೆ ಜನರಿಗೂ ತೊಂದರೆ ಆಗಿದೆ ಎಂಬ ಆರೋಪ ಇದೆ. ಹೀಗಾಗಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಪರಿಶೀಲನೆ ಮಾಡುತ್ತಾರೆ ಎಂದರು.
ನಾಗರೀಕ ಕಾಮಗಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ಪ್ರಸ್ತಾಪ ವಿಚಾರವಾಗಿ ಪ್ರತಿಕ್ರಿಯಿಸಿ, ಇದರಲ್ಲಿ ತಪ್ಪು ಗ್ರಹಿಕೆ ಆಗಿದೆ. ಕೆಲವು ಶಾಸಕರು, ಮುಖಂಡರು ಗುತ್ತಿಗೆ ಮೀಸಲು ಕೋರಿ ಸಿಎಂಗೆ ಮನವಿ ಪತ್ರ ಕೊಟ್ಟಿದ್ದರು. ಸಿಎಂ ಅದನ್ನು ಅಲ್ಪಸಂಖ್ಯಾತ ಇಲಾಖೆಗೆ ಪರಿಶೀಲನೆಗೆ ಕಳಿಸಿದ್ದರು. ಇಷ್ಟು ಬಿಟ್ಟರೆ ಬೇರೇನೂ ಆಗಿಲ್ಲ ವಿಚಾರದಲ್ಲಿ. ಏನೇ ತೀರ್ಮಾನ ಆದರೂ ಸಚಿವ ಸಂಪುಟ ಸಭೆಯಲ್ಲೇ ತೆಗೆದುಕೊಳ್ಳಬೇಕು. ಸಂಬಂಧಿಸಿದ ಇಲಾಖೆ ಸಂಪುಟ ಸಭೆಗೆ ಪ್ರಸ್ತಾವನೆ ತಂದು ತೀರ್ಮಾನ ಆಗಬೇಕು. ಬಳಿಕ ಸರ್ಕಾರಿ ಆದೇಶ ಆಗಬೇಕಾಗುತ್ತದೆ ಎಂದು ಹೇಳಿದರು.
Advertisement