ಬೆಂಗಳೂರು: ಏರ್ ಪೋರ್ಟ್ ರಸ್ತೆಯಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸಲು, ಕಂದಾಯ ಸಚಿವ ಮತ್ತು ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ ಬುಧವಾರ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಸರಣಿ ಸಭೆ ನಡೆಸಿ ಕ್ರಮಗಳ ಕುರಿತು ಚರ್ಚಿಸಿದರು.
ಪ್ರಮುಖ ಪ್ರಸ್ತಾವನೆಗಳಲ್ಲಿ ರಸ್ತೆ ವಿಸ್ತರಣೆ, ಸರ್ವಿಸ್ ರಸ್ತೆ ಅಭಿವೃದ್ಧಿ ಮತ್ತು ಟ್ರಾಫಿಕ್ ಹರಿವನ್ನು ಸುಧಾರಿಸಲು ಮತ್ತು ಪ್ರಯಾಣಿಕರ ತೊಂದರೆಗಳನ್ನು ಸುಲಭಗೊಳಿಸಲು ಹೊಸ ಮೂಲಸೌಕರ್ಯಗಳ ನಿರ್ಮಾಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಎನ್‌ಎಚ್‌ಎಐ ಮತ್ತು ಟ್ರಾಫಿಕ್ ಪೊಲೀಸರೊಂದಿಗೆ ಏರ್‌ಪೋರ್ಟ್ ರಸ್ತೆಯಲ್ಲಿನ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿದ್ದೇನೆ ಎಂದು ಗೌಡ ಹೇಳಿದರು.
ಎನ್‌ಎಚ್‌ಎಐ ರಸ್ತೆಯನ್ನು ವಿಸ್ತರಿಸಬೇಕು. ಹೆಬ್ಬಾಳದ ಮಳೆನೀರು ಚರಂಡಿ ಮೇಲಿನ ಸೇತುವೆ ವಿಸ್ತರಣೆ ಸೇರಿದಂತೆ ಹೆಬ್ಬಾಳ ಫ್ಲೈಓವರ್‌ನಿಂದ ಮಿಲಿಟರಿ ಲ್ಯಾಂಡ್‌ವರೆಗೆ ಸರ್ವಿಸ್ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಪ್ರಸ್ತಾಪಿಸಿದರು. ಜಕ್ಕೂರು ಏರೋಡ್ರೋಮ್ ಬಳಿ ಸಂಚಾರ ಸುಗಮಗೊಳಿಸಲು ಯಲಹಂಕ ಸಿಗ್ನಲ್‌ನಿಂದ ಜಕ್ಕೂರು ಏರೋಡ್ರೋಮ್‌ನವರೆಗೆ ಸರ್ವಿಸ್ ರಸ್ತೆಯನ್ನು ನಿರ್ಮಿಸಿ ಸಂಚಾರ ದಟ್ಟಣೆಯನ್ನು ಸುಧಾರಿಸಲಾಗುವುದು. ಯಲಹಂಕ ಬೈಪಾಸ್‌ನಲ್ಲಿ ಕಾಫಿ ಡೇ ಬಳಿ ಹೆದ್ದಾರಿಯ ಎರಡೂ ಬದಿಗಳಲ್ಲಿ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳನ್ನುನಿರ್ಮಿಸಲಾಗುವುದು.
ಯಲಹಂಕ ಮತ್ತು ಬಾಗಲೂರು ಕ್ರಾಸ್ ನಡುವಿನ ಪಾಲನಹಳ್ಳಿಯಲ್ಲಿ ಹೆದ್ದಾರಿಯಿಂದ ಪ್ರವೇಶ/ನಿರ್ಗಮನ ಸ್ಥಳದ ಮನವಿಯನ್ನು ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು. “ರಾಷ್ಟ್ರೀಯಹೆದ್ದಾರಿ ಎಲಿವೇಟೆಡ್ ರಸ್ತೆಯ ಅಡಿಯಲ್ಲಿ ಆಯ್ದ ಪಾಯಿಂಟ್ ಗಳಲ್ಲಿ U-ಟರ್ನ್ ವ್ಯವಸ್ಥೆ ಒದಗಿಸುವ ಸಾಧ್ಯತೆಯಿದೆ. ಜನದಟ್ಟಣೆಯನ್ನು ನಿವಾರಿಸಲು ಸಾದಹಳ್ಳಿ ಜಂಕ್ಷನ್‌ಗೆ ಮೇಲ್ಸೇತುವೆ ನಿರ್ಮಾಣಕ್ಕೆ ಪರಿಗಣಿಸಲಾಗುವುದು ಎಂದು ಸಚಿವರು ಹೇಳಿದರು, ಮಿಲಿಟರಿ ಫಾರ್ಮ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣದ ಬಗ್ಗೆ ಯೋಚಿಸಲಾಗಿದೆ. ದೀರ್ಘಾವಧಿ ಪರಿಹಾರವಾಗಿ ಕೊಡಿಗೇಹಳ್ಳಿ, ಬ್ಯಾಟರಾಯನಪುರ ಮತ್ತು ಜಕ್ಕೂರು ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್‌ಗಳನ್ನು ನಿರ್ಮಿಸಲು ಎನ್‌ಎಚ್‌ಎಐಗೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
Advertisement