ಬೆಂಗಳೂರು: ರಸ್ತೆ ಬದಿ ನಿಂತು ಜಗಳವಾಡುತ್ತಿದ್ದವರಿಗೆ ವೋಲ್ವೋ ಬಸ್ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರಿನ ಯಲಹಂಕ ಮೇಲ್ಸೇತುವೆಯಲ್ಲಿ ಮಂಗಳವಾರ ನಡೆದಿದೆ.
ಯಲಹಂಕ ಮೇಲ್ಸೇತುವೆ ಮೇಲೆ ಇನೋವಾ ಕಾರಿಗೆ ಮೊದಲು ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಮೇಲ್ಸೇತುವೆ ಮೇಲೆ ಇಬ್ಬರು ಬಲಭಾಗದಲ್ಲಿ ನಿಂತು ಜಗಳವಾಡುತ್ತಿದ್ದರು.
ಇದೇ ವೇಳೆ ಅತಿ ವೇಗವಾಗಿ ಬಂದ ಬಿಎಂಟಿಸಿ ವೋಲ್ವೊ ಬಸ್ ಲಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಟ್ರಕ್ ಚಾಲಕ ಕುಲದೀಪ್ ಕುಮಾರ್ (42) ಸ್ಥಳದಲ್ಲೇ ಸಾವನ್ನಪ್ಪಿದರೆ, ಕಾರು ಚಾಲಕ ಜಗದೀಶ್ (40) ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಸ್ ಚಾಲಕ ಪುಟ್ಟಸ್ವಾಮಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಏಕೈಕ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಯಲಹಂಕ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ಯಲಹಂಕ ಸಂಚಾರ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮೃತರ ಗುರುತಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಘಟನೆಯ ನಂತರ ಕ್ರೇನ್ ಮೂಲಕ ಕಾರು, ಲಾರಿ ಮತ್ತು ಬಸ್ ಅನ್ನು ಮೇಲಕ್ಕೆತ್ತಿ ಪ್ರಯಾಣಿಕರಿಗೆ ಸಂಚಾರ ಮುಕ್ತಗೊಳಿಸಲಾಯಿತು.
Advertisement