ಕಾಂಗ್ರೆಸ್ ವಿರುದ್ಧ 'ಇಸ್ಲಾಮೀಕರಣ' ಆರೋಪ ಮತ್ತು ವಕ್ಪ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸಾಧು ಸಂತರ ನೇತೃತ್ವದಲ್ಲಿ ದಂಗೆ ಎದ್ದು ಕಾಂಗ್ರೆಸ್ ನಾಯಕರು ಮತ್ತು ಮುಸ್ಲಿಂರನ್ನು ರಸ್ತೆಯಲ್ಲಿ ಹುಡುಕಿ ಹುಡುಕಿ ಕೊಲ್ಲುವ ಕಾಲ ಬರುತ್ತದೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಈಶ್ವರಪ್ ವಕ್ಫ್ ವಿಚಾರವಾಗಿ ಮುಸ್ಲಿಮರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಯತ್ನಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ. ಕೃಷಿ ಭೂಮಿ, ದೇವಸ್ಥಾನ, ಮಠಗಳು, ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಶಾಲಾ ಕಾಲೇಜುಗಳ ಆಸ್ತಿಗಳನ್ನೂ ವಕ್ಫ್ ಆಸ್ತಿಯನ್ನಾಗಿ ಪರಿವರ್ತಿಸಲಾಗಿದೆ. ಸರ್.ಎಂ ವಿಶ್ವೇಶ್ವರಯ್ಯ ಹುಟ್ಟೂರನ್ನು ಬಿಟ್ಟಿಲ್ಲ. ಮುಸ್ಲಿಂ ಮುಖಂಡನೊಬ್ಬ ಅಂಬೇಡ್ಕರ್ ಗೆ ಅವಮಾನಿಸಿದ್ದರೂ ಕಾಂಗ್ರೆಸ್ ಮುಸ್ಲಿಂರನ್ನು ನಿರಂತರವಾಗಿ ಬೆಂಬಲಿಸುತ್ತಿದೆ ಎಂದು ಈಶ್ವರಪ್ಪ ಆರೋಪಿಸಿದ್ದರು.
ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಪಕ್ಷದ 50 ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಮಿಷವನ್ನು ಬಿಜೆಪಿ ನೀಡಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಕುರಿತು SIT ತನಿಖೆ ನಡೆಸಲು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರವನ್ನು ಉಪಯೋಗಿಸಿಕೊಂಡು, ಭ್ರಷ್ಟಾಚಾರದ ಪ್ರಕರಣವನ್ನು ತನಿಖೆ ನಡೆಸಲಿ. ಸಿಎಂ ಹೇಳಿಕೆ ಬಫೂನ್ ಗಳು ಕೊಡುವ ಹೇಳಿಕೆ ಆಗಬಾರದು. ಅವರ ಗಮನಕ್ಕೆ ಬರದೇ ಇದೆಲ್ಲಾ ನಡೆಯಲ್ಲ. ಸಿಎಂ ನಿಖರವಾಗಿ 50 ಜನರಿಗೆ 50 ಕೋಟಿ ಅಂದಿದ್ದಾರೆ. ಇದಕ್ಕೂ ಕೂಡಾ ಒಂದು SIT ರಚನೆ ಮಾಡಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. ಸಿದ್ದರಾಮಯ್ಯ ನಡವಳಿಕೆ ನೋಡಿದ್ರೆ ಹಾಸ್ಯಾಸ್ಪದ ಅನಿಸುತ್ತಿದೆ. ಅವರ ಆರೋಪಗಳಿಂದ ಜನ ಸಿಎಂ ಮತ್ತು ಅವರ ಸಂಪುಟದ ಸಹೋದ್ಯೋಗಿಗಳ ಬಗ್ಗೆ ಅನುಮಾನ ಪಡುವಂತೆ ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದರು.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ. ದರ್ಶನ್ ಗೆ ನೀಡಿರುವ ಮಧ್ಯಂತರ ಜಾಮೀನನ್ನು ವಜಾಗೊಳಿಸುವಂತೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸುವ ರಾಜ್ಯ ಪೊಲೀಸರ ಪ್ರಸ್ತಾಪಕ್ಕೆ ಗೃಹ ಇಲಾಖೆ ಅನುಮತಿ ನೀಡಿದ್ದು, ಮುಂದಿನ ವಾರ ಅರ್ಜಿ ಸಲ್ಲಿಸುತ್ತೇವೆ. ರಾಜ್ಯ ಪೊಲೀಸರ ಪ್ರತಿನಿಧಿಯಾಗಿ ಹಿರಿಯ ವಕೀಲ ವಿ.ಎನ್ ರಘುಪತಿ ಅವರನ್ನು ನೇಮಕ ಮಾಡಲಾಗಿದೆ ಎಂದು ದಯಾನಂದ್ ತಿಳಿಸಿದ್ದಾರೆ. ಕೊಲೆ ಪ್ರಕರಣದಲ್ಲಿ 131 ದಿನ ಜೈಲಿನಲ್ಲಿದ್ದ ನಟ ದರ್ಶನ್ ಗೆ ವೈದ್ಯಕೀಯ ಕಾರಣಗಳಿಗಾಗಿ ಹೈಕೋರ್ಟ್ ಆರು ವಾರಗಳ ಕಾಲ ಷರತ್ತುಬದ್ಧ ಜಾಮೀನು ನೀಡಿದ ನಂತರ ಅಕ್ಟೋಬರ್ 30ರಂದು ಜೈಲಿನಿಂದ ಬಿಡುಗಡೆಯಾಗಿದ್ದರು.
ಸಿಬಿಐ ತನಿಖೆ ನಡೆಸದೇ ವಾಪಸ್ ಮಾಡಿದ್ದ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯ 6 ಅದಿರು ಸಾಗಾಣಿಕೆ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಎಸ್ಐಟಿ ರಚನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಗೋವಾದ ಮರ್ಮಗೋವಾ ಮತ್ತು ಪಣಜಿ, ತಮಿಳುನಾಡಿನ ಎನ್ನೋರ್ ಮತ್ತು ಚೆನ್ನೈ, ಕರ್ನಾಟಕದ ನವ ಮಂಗಳೂರು ಮತ್ತು ಕಾರವಾರ ಬಂದರುಗಳಲ್ಲಿ ಹಾಗೂ ಆಂಧ್ರ ಪ್ರದೇಶದ ಕೃಷ್ಣ ಪಟ್ಟಣಂ, ಕಾಕಿನಾಡ ಮತ್ತು ವಿಶಾಖಪಟ್ಟಣಂ ಬಂದರುಗಳಲ್ಲಿ ಅಕ್ರಮ ಅದಿರು ಸಾಗಾಣಿಕೆ ಪ್ರಕರಣಗಳನ್ನು CBI ವಾಪಸ್ಸು ಕಳುಹಿಸಿರುವ ಹಿನ್ನೆಲೆಯಲ್ಲಿ ಆ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಲು ನಿರ್ಣಯಿಸಲಾಗಿದೆ ಎಂದು ಸಚಿವ ಎಚ್.ಕೆ ಪಾಟೀಲ್ ತಿಳಿಸಿದರು.
ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರದ ಇಂದು ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿ ತೆರೆಕಂಡಿದೆ. ಮಫ್ತಿ ಚಿತ್ರದಲ್ಲಿ ಶಿವರಾಜಕುಮಾರ್ ಭೈರತಿ ರಣಗಲ್ ಪಾತ್ರದಲ್ಲಿ ನಟಿಸಿದ್ದರು. ಭೈರತಿ ರಣಗಲ್ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡ ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದರು. ಇದನ್ನು ಹೈಲೈಟ್ ಮಾಡಿ ನಿರ್ದೇಶಕ ನರ್ತನ್ ಭೈರತಿ ರಣಗಲ್' ಸಿನಿಮಾ ಮಾಡಿದ್ದಾರೆ. ನರ್ತನ್ ಈ ಸಿನಿಮಾವನ್ನು ಅದ್ದೂರಿಯಾಗಿ ಕಟ್ಟಿಕೊಟ್ಟಿದ್ದು ಜನರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಚಿತ್ರವನ್ನು ವೀಕ್ಷಿಸಿದ ಡಾಲಿ ಧನಂಜಯ್ ಶಿವಣ್ಣನ ನಟನೆಯನ್ನು ಹಾಡಿ ಹೊಗಳಿದರು. ಇನ್ನು ಚಿತ್ರವನ್ನು ಥಿಯೇಟರ್ ನಲ್ಲೇ ನೋಡಿ ಆನಂದಿಸಿ ಎಂದು ಹೇಳಿದರು. ಇನ್ನು ವಿನಯ್ ರಾಜ್ಕುಮಾರ್ ಹಾಗೂ ಯುವ ರಾಜ್ಕುಮಾರ್ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿ ಸಖತ್ ಥ್ರಿಲ್ ಆದರು.
Advertisement